Ad imageAd image

ಜಾತಿ, ಧರ್ಮ, ಶ್ರೀರಾಮನ ಹೆಸರಿನಲ್ಲಿ ದೇಶ ಒಡೆಯುವ ಕೆಲಸ : ಡಾ. ರಾಮಚಂದ್ರಪ್ಪ ವಿಷಾಧ

Bharath Vaibhav
ಜಾತಿ, ಧರ್ಮ, ಶ್ರೀರಾಮನ ಹೆಸರಿನಲ್ಲಿ ದೇಶ ಒಡೆಯುವ ಕೆಲಸ : ಡಾ. ರಾಮಚಂದ್ರಪ್ಪ ವಿಷಾಧ
WhatsApp Group Join Now
Telegram Group Join Now

ತುರುವೇಕೆರೆ: -ಶಾಂತಿ, ಸೌಹಾರ್ದತೆ, ಸಾಮರಸ್ಯದ ಪ್ರತೀಕವಾಗಿ ನಿರ್ಮಾಣವಾಗಬೇಕಿದ್ದ ದೇಶವನ್ನು ಜಾತಿ, ಧರ್ಮ ಹಾಗೂ ಶ್ರೀರಾಮನ ಹೆಸರಿನಲ್ಲಿ ಒಡೆಯುವ ಕೆಲಸ ನಡೆಯುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದರು.

ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ತಾಲ್ಲೂಕು ವಾಲ್ಮೀಕಿ ಸಮಾಜದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿಯವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹಬ್ಬಗಳು ಬ್ರಾತೃತ್ವ, ಸಾಮರಸ್ಯವನ್ನು ಬೆಸೆಯುವ ಸಂಕೇತವಾಗಬೇಕು. ಆದರೆ ಸಂಘರ್ಷವನ್ನು ಉಂಟು ಮಾಡುವ ವೇದಿಕೆಗಳಾಗಿ ಮಾರ್ಪಾಡಾಗುತ್ತಿದೆ. ಪೊಲೀಸ್ ಬಂದೋಬಸ್ತಿನಲ್ಲಿ ಧಾರ್ಮಿಕ ಹಬ್ಬಗಳನ್ನು ನಡೆಸಲಾಗುತ್ತಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ವಾಲ್ಮೀಕಿ, ಅಂಬೇಡ್ಕರ್, ಬುದ್ದರಂತಹ ಮಹನೀಯರನ್ನು ಜಾತಿಗೆ ಸೀಮಿತಗೊಳಿಸಿ, ಜಾತಿಗೊಂದು ಕಾರ್ಯಕ್ರಮ ನಡೆಸಲಾಗುತ್ತಿರುವುದು ಸರಿಯಲ್ಲ ಎಂದರು.

ರಾಮಾಯಣ ಕೇವಲ ಗ್ರಂಥವಲ್ಲ, ಇಡೀ ಭಾರತ ದೇಶದಲ್ಲಿನ ಜೀವನಾಡಿಯ ಪ್ರತೀಕವಾಗಿದೆ. ಭಾರತ ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಸಂವಿಧಾನವನ್ನು ರೂಪಿಸಿಕೊಂಡಿದ್ದೇವೆ. ದೇಶದ ಸಾಂಸ್ಕೃತಿಕ, ಅಲಿಖಿತ ಸಂವಿಧಾನ ಎಂದರೆ ಅದು ರಾಮಾಯಣ. ರಾಮಾಯಣದಲ್ಲಿ ಆದರ್ಶನೀಯ ದಂಪತಿಗಳು, ಸಹೋದರತೆ, ಸ್ವಾಮಿನಿಷ್ಠೆ, ಸತ್ಯಪರತೆಯನ್ನು ಕಾಣಬಹುದಾಗಿದೆ ಎಂದ ಅವರು, ದೇಶದ ಬುಡಕಟ್ಟು ಸಮುದಾಯಗಳು ತಮ್ಮ ಸಾಂಸ್ಕೃತಿಕ ಚರಿತ್ರೆಯನ್ನು, ಮೌಲ್ಯತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ರಾಮಾಯಣವನ್ನೇ ಆಧಾರವಾಗಿಟ್ಟುಕೊಂಡಿವೆ. ರಾಮಾಯಣ ಒಂದು ಸಮುದಾಯ, ದೇಶಕ್ಕೆ ಸೀಮಿತವಲ್ಲ ಎಂಬುದನ್ನು ಅರಿಯಬೇಕಿದೆ ಎಂದರು.

ಸಮಾರಂಭದಲ್ಲಿ ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷ ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕಲಾವಿದ ನಂಜಪ್ಪ, ಕೃಷಿಕರಾದ ನಾಗರಾಜು, ನಾಗೇಶ್, ಶಿಕ್ಷಕ ಮುನಿರಾಜು ಅವರನ್ನು ಸನ್ಮಾನಿಸಲಾಯಿತು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಕೆಂಪರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭಕ್ಕೂ ಮುನ್ನ ಶ್ರೀ ವಿಶ್ವಕಮಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರವನ್ನು ಪೂರ್ಣ ಕುಂಭ ಹಾಗೂ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಜಿಲ್ಲಾ ಪಂಚಾಯತ್  ಸದಸ್ಯ ಉಗ್ರಪ್ಪ,  ವಾಲ್ಮೀಕಿ ಸಮಾಜದ  ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಮುದ್ದುಮಾರನಹಳ್ಳಿ ಶಿವಣ್ಣ, ಪಪಂ ಉಪಾಧ್ಯಕ್ಷೆ ಶೀಲಾಶಿವಪ್ಪನಾಯಕ, ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ್, ನಿವೃತ್ತ ಎಇಒ ಸೋಮಶೇಖರ್, ನಿವೃತ್ತ ಶಿಕ್ಷಕ ಕರಿಯಣ್ಣ ಸೇರಿದಂತೆ ವಾಲ್ಮೀಕಿ ಸಮಾಜದ ಪದಾಧಿಕಾರಿಗಳು, ಸಮುದಾಯದ ಬಾಂದವರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!