ತುರುವೇಕೆರೆ: ಗ್ರಾಮೀಣ ಕೃಷಿಕರ ಮಕ್ಕಳಿಗೆ ಕೃಷಿ ಅಧ್ಯಯನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಮಾಯಸಂದ್ರದಲ್ಲಿ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪಿಸಲಾಗಿದ್ದು, ಡಿಸೆಂಬರ್ 02 ರಂದು ಕಾಲೇಜಿನ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್.ಎಸ್. ರಾಮೇಗೌಡ ತಿಳಿಸಿದರು.
ಪಟ್ಟಣದ ಸರಸ್ವತಿ ಬಾಲಿಕಾ ಪ್ರೌಢಶಾಲೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳು ಇದ್ದಷ್ಟು ದಿನವೂ ಸಹ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದರು. ಇದರ ಜೊತೆಗೆ ರೈತರ ಮಕ್ಕಳಿಗೆ ಕೃಷಿ ಅಧ್ಯಯನಕ್ಕೆ ಕಾಲೇಜನ್ನು ಪ್ರಾರಂಭಿಸಿ, ಅವರ ಬದುಕನ್ನು ಮತ್ತಷ್ಟು ಹಸನು ಮಾಡಬೇಕೆನ್ನುವುದು ಅವರ ಕನಸಾಗಿತ್ತು. ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಅವಿರತ ಪ್ರಯತ್ನದಿಂದ ಆದಿಚುಂಚನಗಿರಿ ಟ್ರಸ್ಟ್ ಗೆ ಕೃಷಿ ಕಾಲೇಜು ಪ್ರಾರಂಭಿಸಲು ಅನುಮತಿ ದೊರೆತಿದ್ದು ಹಿರಿಯ ಶ್ರೀಗಳ ಕನಸು ನನಸಾಗಿದೆ. ಸರ್ಕಾರ ಹಾಗೂ ಕೃಷಿ ವಿಶ್ವವಿದ್ಯಾನಿಲಯಗಳ ನಿಯಮದ ಪ್ರಕಾರ ಖಾಸಗಿ ಸಂಸ್ಥೆಗಳು ಕೃಷಿ ಕಾಲೇಜು ಪ್ರಾರಂಭಿಸಲು ಅನುಮತಿ ಇರಲಿಲ್ಲ. ಪ್ರಸ್ತುತ ನಿಯಮದಲ್ಲಿ 2009 ರಿಂದ ಈಚೆಗೆ ಸ್ವಲ್ಪ ಮಾರ್ಪಾಡಾಗಿದ್ದು, ಕೃಷಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಖಾಸಗಿ ಸಂಸ್ಥೆಯೊಂದು ಕೃಷಿ ಕಾಲೇಜನ್ನು ಪ್ರಾರಂಭಿಸಿದ ದಾಖಲೆಯನ್ನು ಆದಿಚುಂಚನಗಿರಿ ಟ್ರಸ್ಟ್ ಬರೆದಿದೆ. ಇದೇ ಸಂದರ್ಭದಲ್ಲಿ ಕನಕಪುರ ತಾಲ್ಲೂಕಿನಲ್ಲಿ ಕನಕಪುರ ಗಾಂಧಿ ಎಂದೇ ಹೆಸರಾಗಿದ್ದ ಕರಿಯಪ್ಪನವರು ಗಾಂಧಿ ಫಾರಂ ಪ್ರಾರಂಭಿಸಿ ಕೃಷಿ ಕಾಲೇಜಿಗೆ 50 ಎಕರೆ ಜಮೀನು ಮೀಸಲಿಟ್ಟಿದ್ದರು. ಈಗ ಕನಕಪುರಕ್ಕೂ ಗ್ರಾಮಾಂತರ ಹಿನ್ನೆಲೆ ಕೃಷಿ ಕಾಲೇಜು ಮಂಜೂರಾಗಿದೆ ಎಂದರು.
ಡಿಸೆಂಬರ್ ೦೨ರಂದು ಮಾಯಸಂದ್ರದಲ್ಲಿ ನಿರ್ಮಾಣವಾಗಿರುವ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜು ಉದ್ಘಾಟನಾ ಸಮಾರಂಭದ ದಿವ್ಯ ಸಾನಿದ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು, ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಎಂ.ಟಿ.ಕೃಷ್ಣಪ್ಪ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಸುರೇಶ್ ಎಸ್.ವಿ., ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ಎ.ಶೇಖರ್ ಉಪಸ್ಥಿತರಿರಲಿದ್ದಾರೆ ಎಂದರು.
ಮಾಯಸಂದ್ರ ಕೃಷಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಶಿವಲಿಂಗೇಗೌಡ ಮಾತನಾಡಿ, ಪ್ರಥಮ ವರ್ಷದಲ್ಲಿ ಕಾಲೇಜಿಗೆ 60 ಸೀಟು ನಿಗದಿಯಾಗಿದ್ದು, ಶೇ.50 ರಷ್ಟು ಸೀಟನ್ನು ಗ್ರಾಮೀಣ ಪ್ರದೇಶದ ಕೃಷಿಕರ ಮಕ್ಕಳಿಗೆ ಮೀಸಲಿರಿಸಲಾಗಿದೆ. ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳು ಸಿಇಟಿ ಮೂಲಕ ಬರಬೇಕಿದೆ. ಸಿಇಟಿಯಲ್ಲಿ ಅಥವಾ ಆಡಳಿಯ ಮಂಡಳಿ ಮೂಲಕ ಕಾಲೇಜಿಗೆ ದಾಖಲಾಗಲು ಬರುವ ವಿದ್ಯಾರ್ಥಿಗಳು ಶೇ.50 ಅಂಕ ಕಡ್ಡಾಯವಾಗಿ ಪಡೆದಿರಬೇಕು. ನಿಗದಿಯಾಗಿರುವ 60 ಸೀಟುಗಳಲ್ಲಿ ಸಿಇಟಿಯಿಂದ ಬಂದ ವಿದ್ಯಾರ್ಥಿಗಳಿಗೆ 36 ಹಾಗೂ 24 ಸೀಟುಗಳು ಆಡಳಿತ ಮಂಡಳಿ ಕೋಟಾ ಆಗಿರುತ್ತದೆ. ಸಿಇಟಿ ಮೂಲಕ ದಾಖಲಾಗುವ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷ ಮೊದಲ ಸೆಮಿಸ್ಟರ್ ಗೆ 36,750 ರೂ ಶುಲ್ಕವಿದ್ದು, ಆಡಳಿತ ಮಂಡಳಿ ಕೋಟಾದ ಶುಲ್ಕ 2.50 ಲಕ್ಷ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ಗೋಷ್ಟಿಯಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಪುಟ್ಟರಂಗಪ್ಪ, ನಾಗಮಂಗಲ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ರವೀಂದ್ರ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಅಧಿಕಾರಿ ಚಂದ್ರೇಗೌಡರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್