ತುರುವೇಕೆರೆ: -ಪೌಷ್ಟಿಕಾಂಶದ ಜ್ಞಾನವನ್ನು ಅಳವಡಿಸಿಕೊಂಡು ಸಕಾರಾತ್ಮಕವಾದ ಬದಲಾವಣೆ ತರುವುದರ ಮೂಲಕ ಸಮುದಾಯದ ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವಲ್ಲಿ ರಾಷ್ಟ್ರೀಯ ಪೋಷಣಾ ಮಾಹೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ವೈದ್ಯಾಧಿಕಾರಿ ಡಾ.ಸಂದೇಶ್ ತಿಳಿಸಿದರು.
ತಾಲ್ಲೂಕಿನ ದಂಡಿನಶಿವರ ವಲಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪೌಷ್ಟಿಕಾಂಶವು ವ್ಯಕ್ತಿ ಹಾಗೂ ಸಮುದಾಯದ ಆರೋಗ್ಯ ಮತ್ತು ಅಭಿವೃದ್ದಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಉತ್ತಮ ಪೋಷಣೆಯ ಮಗು ಮತ್ತು ತಾಯಿಯ ಆರೋಗ್ಯ, ಪ್ರತಿರಕ್ಷಣಾ ವ್ಯವಸ್ಥೆ, ಸುರಕ್ಷಿತ ಗರ್ಭಧಾರಣೆ, ಹೆರಿಗೆಗೆ ಸಂಬಂಧಿಸಿದ್ದಾಗಿದೆ. ಇದಲ್ಲದೆ ಸಾಂಕ್ರಾಮಿಕ ರೋಗಗಳು, ಮಧುಮೇಹ, ಹೃದಯ ರಕ್ತನಾಳದ ಕಾಯಿಲೆಗಳಿಂದ ನಮ್ಮನ್ನು ಸಾಕಷ್ಟು ದೂರವಿಡುವುದಲ್ಲದೆ ಆಯುಷ್ಯವನ್ನು ಹೆಚ್ಚಿಸುತ್ತದೆ ಎಂದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ವೆಂಕಟಪ್ಪ ಮಾತನಾಡಿ, ಉತ್ತಮ ಪೌಷ್ಟಿಕ ಆಹಾರವನ್ನು ಪಡೆದ ಮಕ್ಕಳು ಶಕ್ತಿಯುತವಾಗಿ, ಯಾವುದೇ ವೈಕಲ್ಯವಿಲ್ಲದೆ ಬೆಳೆಯುತ್ತಾರೆ. ಅಲ್ಲದೆ ಬೌದ್ದಿಕ, ಮಾನಸಿಕ, ದೈಹಿಕವಾಗಿ ಸದೃಢವಾಗಿರುತ್ತಾರೆ. ಆದ್ದರಿಂದ ತಾಯಂದಿರು ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಪೌಷ್ಟಿಕಾಂಶದ ಮಹತ್ವ ಸಾರುವ ಉದ್ದೇಶದಿಂದಲೇ ಭಾರತ ಸರ್ಕಾರ ಪ್ರತಿ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಪೋಷಣ್ ಮಾಸಾ ಆಚರಣೆಯನ್ನು ನಡೆಸುತ್ತಿದೆ. ಈ ಅಭಿಯಾನವು ಪೋಷಣೆ ದೈಹಿಕ ಚಟುವಟಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರ ಜೊತಗೆ ಸಾಮಾನ್ಯರಲ್ಲಿ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ 9 ಮಂದಿ ಗರ್ಭಿಣಿಯರಿಗೆ ಸೀಮಂತ ಮತ್ತು 6 ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು. ಮಕ್ಕಳ ಅಪೌಷ್ಟಿಕತೆ, ಆಹಾರ ಪದ್ದತಿ, ಒಂದು ಸಾವಿರ ದಿನದ ಮಹತ್ವ, ಗರ್ಭಿಣಿಯರ ಆರೈಕೆ ಬಗ್ಗೆ, ಬಾಲ್ಯವಿವಾಹ ತಡೆಗಟ್ಟುವ ಬಗ್ಗೆ, ಲಿಂಗ ತಾರತಮ್ಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಂಗನವಾಡಿ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಗಮನಸೆಳೆದರು.
ರಾಜ್ಯಪ್ರಶಸ್ತಿ ವಿಜೇತ ಕಲಾವಿದ ಡಿ.ಎಸ್.ಗಂಗಾಧರಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಿದ್ದೇಗೌಡ, ಜೀಬೀಗೌಡ, ವೆಂಕಟೇಶ್, ಶಂಕರೇಗೌಡ, ರಾಜ್ ಕುಮಾರ್, ಮುಖ್ಯೋಪಾಧ್ಯಾಯ ಸುರೇಶ್, ಮುಖ್ಯೋಪಾಧ್ಯಾಯಿನಿ ಸುಜಾತ, ಅಂಗನವಾಡಿ ಮೇಲ್ವಿಚಾರಕಿ ಹೇಮಲತಾ, ಭಾಗ್ಯಜ್ಯೋತಿ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ತಾಯಂದಿರು, ಪುಟಾಣಿ ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್,