ವಿಜಯಪುರ: ಬಾರ್ ನಲ್ಲಿ ಮದ್ಯ ಸೇವಿಸಲು ಹೋಗಿದ್ದ ವ್ಯಕ್ತಿಯೊಬ್ಬ ನೀರು ಎಂದು ತಿಳಿದು ಟೈಲ್ಸ್ ತೊಳೆಯಲು ಇಟ್ಟಿದ್ದ ಆಸಿಡ್ ಮಿಕ್ಸ್ ಮಾಡಿ ಕುಡಿದು ಸಾವನ್ನಪ್ಪಿದ್ದಾರೆ.
ಉಪ್ಪಲಿ ಬುರುಜ್ ನಿವಾಸಿ ಮೊಹ್ಮದ್ ಶಫೀಕ್ ಮನಿರ್ಯಾ(40) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ.ವಿಜಯಪುರದ ಎಲ್.ಬಿ.ಎಸ್. ಮಾರುಕಟ್ಟೆಯಲ್ಲಿರುವ ಸಿದ್ದಾರ್ಥ ಬಾರ್ ನಲ್ಲಿ ಮಂಗಳವಾರ ಬೆಳಿಗ್ಗೆ ಮದ್ಯ ಸೇವಿಸಲು ಹೋಗಿದ್ದರು.
ಅವರು ಟೇಬಲ್ ಮೇಲಿದ್ದ ಆಸಿಡ್ ಅನ್ನೇ ನೀರು ಎಂದು ತಿಳಿದುಕೊಂಡಿದ್ದಾರೆ. ಕುಡಿದ ನಂತರ ಅವರ ಗಂಟಲಲ್ಲಿ ಕಡಿತ ಶುರುವಾಗಿದ್ದು, ಅದನ್ನು ಪರಿಶೀಲಿಸಿದಾಗ ಟೈಲ್ಸ್ ತೊಳೆಯುವ ಆಸಿಡ್ ಎಂದು ಗೊತ್ತಾಗಿದೆ. ಅಷ್ಟರಲ್ಲಿ ಆತ ಕೆಲಸ ಮಾಡುವ ಅಂಗಡಿಗೆ ಹೋಗಿ ಕುಸಿದು ಬಿದ್ದಿದ್ದಾನೆ.
ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೂಲಿ ಕೆಲಸ ಮಾಡಿದ ಜೀವನ ಸಾಗಿಸುತ್ತಿದ್ದ ಶಫೀಕ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಬಾರ್ ನವರ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅವರ ಪತ್ನಿ ಗಾಂಧಿ ಚೌಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.