Ad imageAd image

ಔಷಧಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಕಡಿತಗೊಳಿಸಲು ಔಷಧ ವ್ಯಾಪಾರಿಗಳ ಮನವಿ

Bharath Vaibhav
ಔಷಧಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಕಡಿತಗೊಳಿಸಲು ಔಷಧ ವ್ಯಾಪಾರಿಗಳ ಮನವಿ
WhatsApp Group Join Now
Telegram Group Join Now

ಬಾಗಲಕೋಟೆ  : ಔಷಧಗಳ ಮೇಲೆ ಈಗ ಜಾರಿಯಲ್ಲಿರುವ ಶೇಕಡಾ 12ರ ಜಿ.ಎಸ್.ಟಿ. ತೆರಿಗೆಯನ್ನು ಶೇಕಡಾ 5ಕ್ಕೆ ಇಳಿಸಲು ಹಾಗೂ ಜೀವರಕ್ಷಕ ಔಷಧಗಳಿಗೆ ಜಿ.ಎಸ್.ಟಿ. ವಿನಾಯತಿಯನ್ನು ಮಾಡಲು ಅಖಿಲ ಭಾರತ ಔಷಧ ವ್ಯಾಪಾರಿಗಳ ಒಕ್ಕೂಟದ ಮಹಾಕಾರ್ಯದರ್ಶಿ ರಾಜೀವ ಸಿಂಘಲ್ ಹಾಗೂ ಉಪ ಸಂಘಟನಾ ಕಾರ್ಯದರ್ಶಿ ಎ. ಕೆ. ಜೀವನ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ವಿಷಯವನ್ನು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿರುವ ಬಾಗಲಕೋಟೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಅಶೋಕ ಬಿಜ್ಜಳ ಹಾಗೂ ಕಾರ್ಯದರ್ಶಿ ಬಿ. ಆರ್. ಕಟ್ಟಿ ಅವರು ಈ ಮೂಲಕ ರೋಗಿಗಳ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಬೇಕು ಎಂದು ತಿಳಿಸಿದ್ದಾರೆ.

 

ಸ್ವಾತಂತ್ರ‍್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಸರಳೀಕರಣಗೊಳಿಸುವ ಘೋಷಣೆಯನ್ನು ಸ್ವಾಗತಿಸಿದ ಎಐಒಸಿಡಿ ಅಧ್ಯಕ್ಷ ಜಗನ್ನಾಥ ಶಿಂಧೆ ಅವರು ಔಷಧ ವ್ಯಾಪಾರಿಗಳು ಆರೋಗ್ಯ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಕೊನೆಯ ಕೊಂಡಿಯಾಗಿದ್ದಾರೆ ಎಂದು ಹೇಳಿದರು. ದೇಶಾದ್ಯಂತ 12.40 ಲಕ್ಷ ಔಷಧ ವ್ಯಾಪಾರಿಗಳು ಹಾಗೂ ವಿತರಕರು ರೋಗಿಗಳಿಗೆ ಅಗತ್ಯ ಔಷಧಗಳನ್ನು ಸಮರ್ಪಕವಾಗಿ ತಲುಪಿಸುವ ಹೊಣೆ ಹೊತ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ 140 ಕೋಟಿ ನಾಗರಿಕರೊಂದಿಗೆ ನಿಕಟ ಸಂಪರ್ಕ ಹೊಂದಿರುವ ನಮ್ಮ ಔಷಧ ವ್ಯಾಪಾರಿಗಳು ಸರಕಾರಿ ಬಸ್ಸುಗಳು ಕೂಡ ತಲುಪಲಾರದ ಸ್ಥಳಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಪ್ರಮುಖ ಬೇಡಿಕೆಗಳು:
ಔಷಧ ಬೆಲೆ ನಿಯಂತ್ರಣ ಅಧ್ಯಾದೇಶದ (ಡಿಪಿಸಿಓ) ಅಡಿಯಲ್ಲಿ ನಿಯಂತ್ರಣಕ್ಕೆ ಒಳಪಟ್ಟಿರುವ ಅಗತ್ಯ ಔಷಧಿಗಳನ್ನು ಹೆಚ್ಚುವರಿ ತೆರಿಗೆಗೆ ಒಳಪಡಿಸಬಾರದು. ಎಲ್ಲಾ ಔಷಧಿಗಳು, ವಿಟಮಿನ್‌ಗಳು, ಪ್ರೋಬಯಾಟಿಕ್‌ಗಳು, ಪೌಷ್ಟಿಕಾಂಶ ಮತ್ತು ಆಹಾರ ಪೂರಕಗಳು ಮತ್ತು ಶಿಶು ಆಹಾರವನ್ನು 5% ಜಿ.ಎಸ್.ಟಿ. ಅಡಿಯಲ್ಲಿ ತರಬೇಕು. ಕ್ಯಾನ್ಸರ್, ಮೂತ್ರಪಿಂಡ ರೋಗ, ಹೃದ್ರೋಗ, ಕ್ಷಯರೋಗ, ದೀರ್ಘಕಾಲದ/ಅಪರೂಪದ ಕಾಯಿಲೆಗಳು ಮತ್ತು ರಕ್ತ ಆಧಾರಿತ ಔಷಧಗಳನ್ನು ಜಿ.ಎಸ್.ಟಿ ತೆರಿಗೆಯ ಹೊರೆಯಿಂದ ವಿನಾಯತಿಗೊಳಿಸಬೇಕು. “ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ” ಎಂಬ ತತ್ವಕ್ಕೆ ಅನುಗುಣವಾಗಿ ರೋಗಗಳನ್ನು ತಡೆಗಟ್ಟುವ ಔಷಧಿಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಪೂರಕಗಳು ಜನರ ಕೈಗೆಟುಕುವಂತೆ ಸುಲಭವಾಗಿ ಲಭ್ಯವಿರಬೇಕು.

ಔಷಧಿಗಳು ಐಷಾರಾಮಿ ವಸ್ತುಗಳಲ್ಲ, ಅವು ಜೀವ ಉಳಿಸುವ ಸಾಧನಗಳು ಎಂದು ಪತ್ರಿಕಾ ಪ್ರಕಟನೆಯು ತಿಳಿಸಿದೆ. ಜಿ.ಎಸ್.ಟಿ. ಕಡಿತವು ಲಕ್ಷಾಂತರ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ವಿಶೇಷವಾಗಿ ಆರೋಗ್ಯ ವಿಮೆ ಇಲ್ಲದವರಿಗೆ ನೇರ ಪರಿಹಾರವನ್ನು ನೀಡುತ್ತದೆ. ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸರ್ಕಾರವು ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಔಷಧ ವ್ಯಾಪಾರಿಗಳ ಸಂಘವು ವ್ಯಕ್ತಪಡಿಸಿದೆ. ಮುಂಬರುವ ಜಿ.ಎಸ್.ಟಿ. ತಿದ್ದುಪಡಿಗಳು ವಾಣಿಜ್ಯ ಆಶಯಗಳನ್ನು ಮೀರಿ ಮಾನವೀಯ ದೃಷ್ಟಿಕೋನವನ್ನು ಹೊಂದಿರುತ್ತವೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಅಶೋಕ ಬಿಜ್ಜಳ ಭರವಸೆ ವ್ಯಕ್ತಪಡಿಸಿದರು

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!