ಕುಷ್ಟಗಿ :- ಹನುಮಸಾಗರ ಗ್ರಾಮದಲ್ಲಿಅನಾದಿ ಕಾಲದಿಂದಲೂ ಮೂರು ವರ್ಷಗಳಿಗೊಮ್ಮೆ ನಡೆಸಿಕೊಂಡು ಬಂದಿರುವ ಗ್ರಾಮದೇವತೆ ದ್ಯಾಮವ್ವನ ಜಾತ್ರಾಮಹೋತ್ಸವ ಪ್ರಾರಂಭವಾಗಿದೆ. ಸೋಮವಾರ ರಾತ್ರಿ ಸಂತೆ ಬಜಾರದ ಗಂಡನ ಮನೆಯಿಂದ(ದ್ಯಾಮವ್ವನ ದೇವಸ್ಥಾನದಿಂದ) ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕರಿಸಿದ್ದೇಶ್ವರ ಮಠದ ಮುಂದಿನ ರಸ್ತೆ ಕಲ್ಲೋಣಿಯ ತವರು ಮನೆಗೆ (ದ್ಯಾಮವ್ವನ ಕಟ್ಟೆಗೆ) ಡೊಳ್ಳು, ವಿವಿಧ ವಾದ್ಯ ವೈಭವ, ಬಾಣ ಬಿರುಸುಗಳೊಂದಿಗೆ ಕರೆ
ತರಲಾಯಿತು.
ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಜನಾಂಗದ ಎಲ್ಲಾ ಜನತೆ ಜಾತಿ, ಪಕ್ಷ ಬೇಧವಿಲ್ಲದೇ ಒಗ್ಗಟ್ಟಿನಿಂದ ಪಾಲ್ಗೊಂಡಿದ್ದರು.ಈ ಭಾಗದ ಸಂಸ್ಥಾನ ವಂಶಸ್ಥ ವೆಂಕಪ್ಪಯ್ಯ ಗೋಪಾಲಕೃಷ್ಣಪ್ಪಯ್ಯ ದೇಸಾಯಿ ಯಲಬುಣಚಿ ಕುಟುಂಬದವರು ಡೊಳ್ಳು, ವಾದ್ಯ ವೈಭವಗಳೊಂದಿಗೆ ಮರುದಿನ ಮಂಗಳವಾರ ಬೆಳ್ಳಿಗೆ ರೇಷ್ಮೆ ಸೀರೆ ಕುಪಸ, ನವಧಾನ ಹಣ್ಣು ಹಂಪಲುಗಳೊಂದಿಗೆ ತವರು ಮನೆಗೆ ತೆರಳಿ ಪೂಜೆ ನೆರವೇರಿಸಿ ದ್ಯಾಮವ್ವಗೆ ಉಡಿ ತುಂಬಿದರು.
ನಂತರ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು, ಎಲ್ಲಾ ಸಮಾಜದ ಮಹಿಳೆಯರು ತಂಡೋಪತಂಡವಾಗಿ ಬಂದು ದ್ಯಾಮವ್ವಳ ಉಡಿ ತುಂಬುವ ಕಾರ್ಯ ಮಧ್ಯಾಹ್ನದ ವರೆಗೂ ಸಾಗಿತ್ತು. ಎಪ್ರಿಲ್ 10 ಶುಕ್ರವಾರದಂದು ನಂದಾದೀಪ ಹಾಕಲಾಗಿತ್ತು. ಸೋಮವಾರ ರಾತ್ರಿ ದ್ಯಾಮವ್ವಳನ್ನು ತವರು ಮನೆಗೆ ಕರೆದೊಯ್ದಿದ್ದು, ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ ಮೆರವಣಿಗೆ ಯೊಂದಿಗೆ ಮತ್ತೇ ಗಂಡನ ಮನೆಗೆ ಸಕಲ ವಾದ್ಯ ವೈಭವಗಳೊಂದಿಗೆ ಕರೆತರಲಾಯಿತು.
ಜಾತ್ರೆ ಪ್ರಾರಂಭವಾಗುತ್ತಿದ್ದಂತೆ ಒಂದು ವಾರ ಗ್ರಾಮದಲ್ಲಿ ಯಾರದೇ ಮನೆಯಲ್ಲಿ ಅಥವಾ ಗಿರಣಿಗಳಲ್ಲಿ ಕುಟ್ಟುವದು, ಬೀಸುವದನ್ನು ಮತ್ತು ರೊಟ್ಟಿ ಬಡಿಯುವದು, ಎತ್ತುಗಳ ಹೆಗಲಿಗೆ ಬಂಡಿ, ನೇಗಿಲು, ಗಳಿ ಕಟ್ಟುವದನ್ನೂ ಹಿಂದಿನ ಸಂಪ್ರದಾ ಯದ ಪ್ರಕಾರ ಸ್ಥಗಿತಗೊಳಿಸಲಾಗಿದೆ.ದಿ.16, ಗುರುವಾರ ದೇವಿಗೆ ಸಕಲ ಸದ್ಭಕ್ತರು ಪೂಜೆ ಸಲ್ಲಿಸಿ, ಕಾಯಿ, ಕರಪೂರ, ನೈವೇದ್ಯ ಅರ್ಪಿಸುವದು, ದಿ.17, ಶುಕ್ರವಾರ ಬೆಳಿಗ್ಗೆ 8-30 ಕ್ಕೆ ದೇವಿಯ ಉಡಿ ತುಂಬುವ ಕಾರ್ಯಕ್ರಮ ನೆಡೆಯಲಿದೆ.
ವರದಿ:- ಶಿವಕುಮಾರ ಕೆಂಭಾವಿಹಿರೇಮಠ