ಸಿರುಗುಪ್ಪ : ನಗರದ 18ನೇ ವಾರ್ಡ್ ನಲ್ಲಿ ನಗರಸಭೆ ಕಾರ್ಯಾಲಯ ವತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಸ್ಥಳೀಯ ನಿವಾಸಿಗಳಿಗೆ ಇ-ಖಾತಾ ಸೌಲಭ್ಯ ಪಡೆಯಲು ಎ ಮತ್ತು ಬಿ ನೋಂಧಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ನಗರಸಭೆ ಕಂದಾಯ ನಿರೀಕ್ಷಕ ವೆಂಕೋಬ ಅವರು ಮಾತನಾಡಿ ನಗರಸಭೆ ವ್ಯಾಪ್ತಿಗೊಳಪಡುವ ನಗರದಲ್ಲಿ ಅನಧಿಕೃತ ಬಡಾವಣೆ (ಆರ್.ಎಸ್ ಲ್ಯಾಂಡ್) ನಿವೇಶನಗಳಲ್ಲಿ ವಾಸಿಸುವ ಸಾರ್ವಜನಿಕರು ಇ-ಖಾತಾ ಪಡೆಯಲು ಮೇ.10ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆದ್ದರಿಂದ ಆಸ್ತಿಗೆ ಸಂಬಂದಿಸಿದ ನೋಂದಾಯಿತ ಮಾರಾಟ ಪ್ರತಿಗಳು, ದಾನಪತ್ರ, ವಿಭಾಗ ಪತ್ರಗಳು, ನಿಗಮ ಮಂಡಳಿಗಳಿಂದ ನೀಡಿದ ಹಕ್ಕುಪತ್ರಗಳು, ಮಂಜುರಾತಿ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಆಸ್ತಿಯ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲಿಕರ ಹಾಗೂ ಸ್ವತ್ತಿನ ಪೋಟೋ ಹಾಗೂ ಗುರುತಿನ ದಾಖಲೆ ಪ್ರತಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ವಾರದೊಳಗೆ ನೀವು ನಮೂನೆ-3, ಹಾಗೂ ನಮೂನೆ-3ಎ ಪಡೆಯಬಹುದಾಗಿದೆ.
ಯಾವುದೇ ಮದ್ಯವರ್ತಿಗಳಿಗೆ ಹಣ ನೀಡದೇ ನೇರವಾಗಿ ಕಛೇರಿಗೆ ಹೋಗಿ ಕಛೇರಿ ರಸೀದಿಯಲ್ಲಿ ನಿಗದಿಪಡಿಸಿದ ಹಣವನ್ನು ಮಾತ್ರ ಕಟ್ಟಬೇಕು.
ಒಂದು ವೇಳೆ ಮದ್ಯವರ್ತಿಗಳಿಗೆ ಹಣ ನೀಡಿದಲ್ಲಿ ನಗರಸಭೆ ಕಾರ್ಯಾಲವು ಹೊಣೆಯಾಗಿರುವುದಿಲ್ಲ.
ಆದ್ದರಿಂದ ಅನಧಿಕೃತ ಬಡಾವಣೆಗಳಲ್ಲಿನ ನಗರ ನಿವಾಸಿಗಳು ತಮ್ಮ ಅರ್ಜಿ ಸಲ್ಲಿಸಿ ಇ-ಖಾತಾ ಪಡೆಯಬೇಕೆಂದು ತಿಳಿಸಿದರು.
ಇದೇ ವೇಳೆ ಕಂದಾಯ ಅಧಿಕಾರಿ ಅನಂತ್, ಕರ ವಸೂಲಿಗಾರ ಮಾರೇಶ, ಚನ್ನವೀರ, ಸಿಬ್ಬಂದಿಗಳಾದ ಪಂಪಾಪತಿ, ಶಂಕ್ರಗೌಡ, ಶಿವಕುಮಾರ್ ಹಾಗೂ ವಾರ್ಡಿನ ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ