ಬೆಂಗಳೂರು: ತಣ್ಣಗಿದ್ದ ರಾಜಕೀಯ ಅಂಗಳ ಇದ್ದಕ್ಕಿದ್ದಂತೆ ಕಾವೇರತೊಡಗಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಮೀಟಿಂಗ್ ನಡೆದಿದ್ದು, ಇದು ಯಾವ ಮ್ಯಾಟರ್ ಗೆ ನಡೆದ ಮೀಟಿಂಗ್ ಎಂಬುದೀಗ ಕುತೂಹಲ ಮೂಡಿಸಿದೆ.
ಬೆಳಗಾವಿ ಅಧಿವೇಶನ, ಮನಮೋಹನ್ ಸಿಂಗ್ ಮರಣ ಮೊದಲಾದ ಕಾರಣಕ್ಕೆ ತಣ್ಣಗಾಗಿದ್ದ ರಾಜ್ಯ ರಾಜಕೀಯ ಇದೀಗ ಗರಿಗೆದರಿದೆ. ಸಚಿವ ಸತೀಶ್ ಜಾರಕಿಹೊಳಿ ಮನೆ ಈಗ ರಾಜಕೀಯ ಶಕ್ತಿ ಕೇಂದ್ರವಾಗತೊಡಗಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಂಬ ಚರ್ಚೆಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಈ ಮೀಟಿಂಗ್ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶೀಘ್ರದಲ್ಲೇ ಮಹತ್ವದ ಹುದ್ದೆ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಸುತ್ತ ನಾಯಕರ ದಂಡು ಓಡಾಟ ಶುರು ಮಾಡಿದೆ. ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸ ಕೈಗೊಳ್ಳುತ್ತಾರೆ ಎಂಬ ಮಾಹಿತಿ ಹೊರಬಿದಿದ್ದೆ. ಇದರ ಉದ್ದೇಶವೇನು ಎಂಬುದು ಮಾತ್ರ ಇನ್ನಷ್ಟೇ ತಿಳಿಯಬೇಕಿದೆ.
ಈ ನಡುವೆ ಡಿ.ಕೆ. ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವ ಹೊತ್ತಿನಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಸಿಎಂ ಬದಲಾವಣೆ ಚರ್ಚೆಯ ಕುರಿತು ಕೆಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.
ವರದಿ: ಅಯ್ಯಣ್ಣ ಮಾಸ್ಟರ್