ಕಠ್ಮಂಡು: ಪಶ್ಚಿಮ ನೇಪಾಳದಲ್ಲಿ ಶುಕ್ರವಾರ ಸಂಜೆ ಎರಡು ಭಾರಿ ಭೂಕಂಪಗಳು ಸಂಭವಿಸಿದ್ದು, ಕೇವಲ ಮೂರು ನಿಮಿಷಗಳ ಅಂತರದಲ್ಲಿ 2 ಸಲ ಭೂಮಿ ಕಂಪಿಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಸೆಂಟರ್ ಪ್ರಕಾರ, ಜಾಜರ್ಕೋಟ್ ಜಿಲ್ಲೆಯಲ್ಲಿ ಸ್ಥಳೀಯ ಕಾಲಮಾನ ರಾತ್ರಿ 8:07ಕ್ಕೆ 5.2 ರ ತೀವ್ರತೆಯ ಮೊದಲ ಕಂಪನವು ದಾಖಲಾಗಿದೆ. ಬಳಿಕ 8:10ಕ್ಕೆ 5.5 ತೀವ್ರತೆಯ ಭೂಕಂಪನ ಸಂಭವಿಸಿದೆ.
ಎರಡೂ ಭೂಕಂಪಗಳ ಕೇಂದ್ರಬಿಂದುವು ಕಠ್ಮಂಡುವಿನ ಪಶ್ಚಿಮಕ್ಕೆ ಸರಿಸುಮಾರು 525 ಕಿ.ಮೀ. ದೂರದಲ್ಲಿರುವ ಜಜರ್‌ಕೋಟ್ ಜಿಲ್ಲೆಯ ಪಾನಿಕ್ ಪ್ರದೇಶದಲ್ಲಿ ಕಂಡುಬಂದಿದೆ.
ಪಶ್ಚಿಮ ನೇಪಾಳದ ಸುರ್ಖೇತ್, ಡೈಲೇಖ್ ಮತ್ತು ಕಲಿಕೋಟ್ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪನಗಳಿಂದ ಯಾವುದೇ ಸಾವುನೋವುಗಳು ಹಾಗೂ ಹೆಚ್ಚಿನ ಹಾನಿಯ ಬಗ್ಗೆ ವರದಿಯಾಗಿಲ್ಲ.
ಭೂಕಂಪನ ಸಕ್ರಿಯ ವಲಯದಲ್ಲಿರುವ ನೇಪಾಳದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ. ಭೂಕಂಪನ ಪೀಡಿತ ಪ್ರದೇಶಗಳಲ್ಲಿ ಸಂಭಾವ್ಯ ಹಾನಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದು, ಮುಂಜಾಗ್ರತೆ ವಹಿಸಲಾಗಿದೆ.