ತುರುವೇಕೆರೆ: ಮುಂದಿನ ಮೂರು ವರ್ಷ ಇದೇ ಭ್ರಷ್ಟ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೆ ರಾಜ್ಯದಲ್ಲಿ ಆರ್ಥಿಕ ಸುನಾಮಿ ಏಳುವ ಸಾಧ್ಯತೆ ದಟ್ಟವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಎನ್ಡಿಎ ಮೈತ್ರಿಕೂಟ (ಬಿಜೆಪಿ, ಜೆಡಿಎಸ್) ಪಕ್ಷಗಳು ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಸಂಪದ್ಭರಿತವಾದ ಕರ್ನಾಟಕವನ್ನು ಸಾಲದ ಹೊರೆಯಲ್ಲಿ ಮುಳುಗುವಂತೆ ಮಾಡಿದೆ. ಕೇವಲ ಎರಡೇ ವರ್ಷದಲ್ಲಿ ಐದು ಗ್ಯಾರಂಟಿಗಳ ಹೆಸರಿನಲ್ಲಿ ಎರಡು ಲಕ್ಷ ಕೋಟಿ ಸಾಲ ಮಾಡಿದ್ದಾರೆ. 16 ಬಜೆಟ್ ಮಂಡಿಸುತ್ತೀನೆಂದು ಬೆನ್ನು, ತೊಡೆ ತಟ್ಟಿಕೊಂಡು ಬೀಗುತ್ತಿದ್ದ ಸಿದ್ದರಾಮಯ್ಯನವರೇ ಬೂಟಾಟಿಕೆಯ ಡೈಲಾಗ್ ಗಳಿಂದ ರಾಜ್ಯದ ಜನತೆಯ ಹೊಟ್ಟೆ ತುಂಬಲ್ಲ, ನೀವೇ ಬೇಕಾ ಎರಡು ಲಕ್ಷ ಕೋಟಿ ಸಾಲ ಮಾಡಿ ನಾಲ್ಕು ಲಕ್ಷ ಕೋಟಿ ಬಜೆಟ್ ಮಂಡಿಸುವುದಕ್ಕೆ. ನೀವು ಮಾಡಿದ ಸಾಲದಿಂದಾಗಿ ನಿಮ್ಮ, ನಮ್ಮ ಮನೆ ಮಕ್ಕಳು, ಕಾಕಾ ಪಾಟೀಲ್, ಮಹದೇವಪ್ಪನವರ ಮಕ್ಕಳು ಸೇರಿದಂತೆ ಈಗ ತಾನೇ ಹುಟ್ಟಿದ ಮಕ್ಕಳ ತಲೆಯ ಮೇಲೂ 15 ಸಾವಿರ ರೂ ಸಾಲದ ಹೊರೆಯನ್ನು ಹೊರಿಸಿದ್ದೀರಿ, ಇದೆಯೇ ನಿಮ್ಮ ಸಾಧನೆ ಎಂದು ಪ್ರಶ್ನಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿ, ಮಣಿಪುರದಿಂದ ಮುಂಬೈವರೆಗೂ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಪಾದಯಾತ್ರೆ ಮೂಲಕ ಎಲ್ಲಾ ಜಾತಿ, ಧರ್ಮ, ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡುವುದಾಗಿ ಹೇಳಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಆದರೀಗ ಅವರದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮಾಡುತ್ತಿರುವುದೇನು? ಜಾತಿಗಣತಿ ಹೆಸರಿನಲ್ಲಿ ಸಮುದಾಯಗಳ ನಡುವೆ ಜಾತಿ ದ್ವೇಷದ ವಿಷಬೀಜವನ್ನು ಭಿತ್ತುವ ಕೆಲಸವನ್ನು ಮಾಡುತ್ತಿದೆ ಎಂದು ಕಿಡಿಕಾರಿದ ಅವರು, ಜಾತಿಗಣತಿ ಮಾಡುವುದಕ್ಕೆ ಸಂವಿಧಾನದಡಿಯಲ್ಲಿ ಅಧಿಕಾರವಿರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯದಲ್ಲಿ ಹಿಂದುಳಿದಿರುವ, ಶೋಷಿತ ಸಮುದಾಯಗಳನ್ನು ಮೇಲೆತ್ತುವುದಕ್ಕಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ, ಆದರೆ ನಿಮಗೆ ಬೇಕಾದಂತೆ, ನಿಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಜಾತಿ, ಧರ್ಮ, ಸಮುದಾಯದ ನಡುವೆ ಕಂದಕ ಸೃಷ್ಟಿಸುವಂತಹ ಸಮೀಕ್ಷೆ ನಡೆಸಬೇಡಿ. ಜನರ ಭಾವನೆಯೊಂದಿಗೆ ಚೆಲ್ಲಾಟವಾಡಬೇಡಿ ಸಿದ್ದರಾಮಯ್ಯನವರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿರುವುದು ಸಿದ್ದರಾಮಯ್ಯ ಸರ್ಕಾರವಲ್ಲ, ಟ್ಯಾಕ್ಸ್ ರಾಮಯ್ಯ ಸರ್ಕಾರ. ಗಾಳಿ, ಬಿಸಿಲು ಬಿಟ್ಟು ಎಲ್ಲದಕ್ಕೂ ತೆರಿಗೆ ಹಾಕಿ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಶೇ.60 ಕಮೀಷನ್ ಸರ್ಕಾರವಾಗಿದೆ. ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಮೀಷನ್ ಇಲ್ಲದೆ ಯಾವುದೇ ಕೆಲಸ ಈ ಸರ್ಕಾರದಲ್ಲಾಗುತ್ತಿಲ್ಲ. 16 ಬಜೆಟ್ ಮಂಡಿಸಿದ್ದೇನೆನ್ನುವ ಸಿದ್ದರಾಮಯ್ಯನವರು ಬಜೆಟ್ನಲ್ಲಿ ರೈತರಿಗೆ ಒಂದು ರೂಪಾಯಿ ನೀಡಿಲ್ಲ. ಅದೇ ಕುಮಾರಸ್ವಾಮಿಯವರು ಬಜೆಟ್ ಮಂಡಿಸಿದಾಗ 25ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ರಾಜ್ಯದಲ್ಲಿ ರೈತರ ಪರ, ಜನಪರ ಆಡಳಿತ ನೀಡಿದ ಏಕೈಕ ವ್ಯಕ್ತಿ ಕುಮಾರಸ್ವಾಮಿ ಮಾತ್ರ ಎಂದರು.
ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ, ತುಘಲಕ್ ಸರ್ಕಾರ. ಈ ಸರ್ಕಾರದಿಂದ ರಾಜ್ಯದ ಜನತೆ ನೆಮ್ಮದಿಯಿಂದ ಜೀವನ ಮಾಡಲು ಸಾದ್ಯವಾಗುತ್ತಿಲ್ಲ. ಗ್ಯಾರಂಟಿ ನೀಡಿದ್ದೇವೆಂದು ಹೇಳುತ್ತಾ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ. ಪೆಟ್ರೋಲ್, ಡೀಸೆಲ್, ಹಾಲು, ವಿದ್ಯುತ್, ಬಸ್, ಮೆಟ್ರೋ, ಮದ್ಯ, ಸ್ಟ್ಯಾಂಪ್ ಡ್ಯೂಟಿ ಸೇರಿದಂತೆ ಎಲ್ಲವುದರ ದರ ಏರಿಕೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಜನರೇ ಸರ್ಕಾರ ತೊಲಗಿದರೆ ಸಾಕು ಎಂಬಂತೆ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಜಿಪಂ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ ಸೇರಿದಂತೆ ಬಿಜೆಪಿ, ಜೆಡಿಎಸ್ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ