ಸಿರುಗುಪ್ಪ : ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಪ್ಪನಾಳ್ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿನ ರಸ್ತೆಯ ಮೇಲೆ ಚರಂಡಿ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು ರೋಗಗಳ ಭೀತಿಯಲ್ಲೇ ಮಕ್ಕಳು ವಿದ್ಯಾಭ್ಯಾಸ ಮಾಡುವ ಅನಿವಾರ್ಯತೆ ಎದುರಾಗಿದೆ.
ಗ್ರಾಮದ ಇನ್ನಿತರ ಬೀದಿಗಳಲ್ಲೂ ಮಳೆಗಾಲದಲ್ಲಿ ನಿಲ್ಲುವಂತೆ ಚರಂಡಿ ನೀರು ರಸ್ತೆಯ ಮೇಲೆ ಹರಿದು ಮಲಿನ ವಾತಾವರಣ ಉಂಟಾಗಿದ್ದು, ಗ್ರಾಮದ ಜನರು ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ರೋಗಗಳಿಂದ ಬಳಲುವಂತಾಗಿದ್ದು ಆರೋಗ್ಯ ಕೇಂದ್ರಗಳಿಗೆ ಅಲೆಯುವಂತಾಗಿದೆ.
ಶಾಲೆಗೆ ಚಿಕ್ಕ ಮಕ್ಕಳು ಬರುತ್ತಾರೆ. ವಯೋವೃದ್ದರು, ವಾಹನ ಸವಾರರು ಗಲೀಜಿನಿಂದ ಕೂಡಿದ ರಸ್ತೆಯ ಮೇಲೆ ತಿರುಗಾಡುವಂತಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರಾದ ಈರಣ್ಣ ಒತ್ತಾಯಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಹೆಚ್.ಭೀಮಣ್ಣ ಅವರು ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದೆ. ಸ್ಥಳೀಯ ಆಡಳಿತ ಅಧಿಕಾರಿಗಳು ನೀರು ನಿಲ್ಲದಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
ಉಪ್ಪಾರ ಹೊಸಳ್ಳಿ ಗ್ರಾಮದಲ್ಲೂ ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ರಸ್ತೆಯಿಲ್ಲದೇ ದಿನನಿತ್ಯ ಬಳಕೆಯ ಚರಂಡಿ ನೀರು ರಸ್ತೆಯ ಮೇಲೆ ಹರಿದು ಬೀದಿಗಳು ಕೆಸರಿನಂತಾಗಿವೆ.
ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದೊಳಗೆ ಮತ್ತು ಮುಂಭಾಗದಲ್ಲೂ ಕಸದಿಂದ ಕೂಡಿದೆ.
ಇನ್ನು ಮುಂದಾದರೂ ಜಿಲ್ಲಾ ಮಟ್ಟದ ಮೇಲಾಧಿಕಾರಿಗಳು ಈ ಬಗ್ಗೆ ಗಮನವಹಿಸಿ ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಶುದ್ದ ವಾತಾವರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಸಾರ್ವಜನಿಕರು ಆಗ್ರಹಿಸಿದರು.
ವರದಿ : ಶ್ರೀನಿವಾಸ ನಾಯ್ಕ