ತುರುವೇಕೆರೆ: ತಾಲೂಕಿನ ವಿವಿಧ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಶುಕ್ರವಾರ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗು ದಾಖಲಾತಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಕಸಬಾ ಮತ್ತು ದಂಡಿನಶಿವರ ಹೋಬಳಿ ವ್ಯಾಪ್ತಿಯ ಕಲ್ಕೆರೆ, ದೊಡ್ಡಗೋರಾಘಟ್ಟ, ಸಿದ್ದನಹಟ್ಟಿ, ಮುನಿಯೂರು, ಮಾದಿಹಳ್ಳಿ, ತಾಳ್ಕೆರೆ, ಅರಳೀಕೆರೆ, ಹರಿಕಾರನಹಳ್ಳಿ, ಬಾಣಸಂದ್ರ, ಲೋಕಮ್ಮನಹಳ್ಳಿ, ಪಟ್ಟಣದ ವಿದ್ಯಾರಣ್ಯ ಪ್ರೌಢ ಶಾಲೆ, ಜಿಜೆಸಿ, ದೊಂಬರನಹಳ್ಳಿ, ಆನೇಕೆರೆ ಗ್ರಾಮಗಳ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪಾಠ ಶಾಲೆ, ಸರ್ಕಾರಿ ಪ್ರೌಢ ಶಾಲೆ ಹಾಗು ಅನುದಾನಿತ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದರು.
ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕಾರ್ಯವೈಖರಿ, ಮಕ್ಕಳ ತರಗತಿವಾರು ಹಾಜರಾತಿ, ದಾಖಲಾತಿ, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಸಮಪರ್ಕವಾಗಿ ನಡೆಯುತ್ತಿರುವ ಬಗ್ಗೆ ಮಕ್ಕಳಿಂದ ಕೇಳಿ ಮಾಹಿತಿ ಪಡೆದುಕೊಂಡರು.
ಇವುಗಳ ಜೊತೆಗೆ ತರಗತಿವಾರು ಸೇತುಬಂಧ ಮತ್ತು ಸದರಿ ವರ್ಷದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶಮುಖಿ ಕಾರ್ಯಚಟುವಟಿಕೆಗಳು ಹಾಗು ಪ್ರತಿ ವಿದ್ಯಾರ್ಥಿಗೂ ಕಡ್ಡಾಯವಾಗಿ ಓದು, ಬರಹ, ಸರಳ ಲೆಕ್ಕಾಚಾರ ಗಣಿತ ಬರುವಂತೆ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಮಾಡಬೇಕೆಂದು ಹೇಳಿದರು. ಜೊತೆಗೆ ಮಕ್ಕಳು ನಿರಂತರ ಗೈರಾಗದಂತೆ ನೋಡಿಕೊಳ್ಳಬೇಕು. ಒಟ್ಟಾರೆ ಶಾಲೆಯ ಫಲಿತಾಂಶ ಶೇಕಡ ನೂರರಷ್ಟು ಬರುವಂತೆ ಎಲ್ಲ ಶಿಕ್ಷಕರು ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶೀ ಸೋಮೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಾಂತರಾಜು, ಶೆಟ್ಟಿಗೊಂಡನಹಳ್ಳಿ ಶಾಲೆಯ ವಾಸು, ಸಹ ಶಿಕ್ಷಕರು ಇದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




