ರಾಜಸ್ಥಾನದ ಟೊಂಕ್ ಜಿಲ್ಲೆಯ ಬನಾಸ್ ನದಿಯಲ್ಲಿ ಮುಳುಗಿ ಎಂಟು ಯುವಕರು ಸಾವನ್ನಪ್ಪಿದ ಘಟನೆ ನಡೆದಿದ್ದು, ಮುವರನ್ನು ರಕ್ಷಿಸಲಾಗಿದೆ.
25 ರಿಂದ 30 ವರ್ಷದ ಒಳಗಿನ ಸುಮಾರು 11 ಯುವಕರ ತಂಡ ಜೈಪುರದಿಂದ ಟೊಂಕ್ ಜಿಲ್ಲೆಗೆ ಪಿಕ್ನಿಕ್‌ಗಾಗಿ ಬಂದಿದ್ದರು.
ಆಗ ಯುವಕರು ಬನಾಸ್ ನದಿಯಲ್ಲಿ ಈಜಲೆಂದು ಇಳಿದಿದ್ದಾರೆ.ಈ ವೇಳೆ ಯುವಕ ಈಜಲು ಆಗದೇ ಒದ್ದಾಡಿದ್ದಾನೆ.
ಇದನ್ನು ಕಂಡ ಉಳಿದ ಸ್ನೇಹಿತರು ಆತನನ್ನು ಕಾಪಾಡಲು ಮುಂದಾಗಿದ್ದಾರೆ. ಈ ವೇಳೆ ಕಾಲು ಜಾರಿ ಎಲ್ಲರೂ ಒಬ್ಬರ ಹಿಂದೆ ಒಬ್ಬರಂತೆ ನೀರಿಗೆ ಬಿದ್ದಿದ್ದಾರೆ. ಈ ಘಟನೆಯಲ್ಲಿ 8 ಜನ ಸಾವನ್ನಪ್ಪಿದ್ದರೆ, ಮೂವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದು, ಇದು ತುಂಬಾ ದುಃಖಕರ ಘಟನೆ. ಈ ಜನರು ಜೈಪುರದಿಂದ ಇಲ್ಲಿಗೆ ಪಿಕ್ನಿಕ್‌ಗಾಗಿ ಬಂದಿದ್ದರು. ಈ ವೇಳೆ ಇಂತಹ ಘಟನೆ ನಡೆದಿದೆ ಎಂದರು.
ಇನ್ನು ಮೃತರ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ಆರ್ಥಿಕ ಸಹಾಯ ನೀಡಬೇಕು ಅಲ್ಲದೇ ಇಂತಹ ಘಟನೆಗಳನ್ನು ತಡೆಯಲು ತಾಂತ್ರಿಕ ತಂಡವನ್ನು ಕಳುಹಿಸುವ ಮೂಲಕ ಸಮೀಕ್ಷೆ ನಡೆಸಿ ಚೆಕ್ ಪೋಸ್ಟ್ ಮಾಡಬೇಕು ಎಂದು ಸಚಿನ್ ಪೈಲಟ್ ಒತ್ತಾಯಿಸಿದರು.




