ಎಜಬಾಸ್ಟನ್ (ಬರ್ಮಿಂಗ್ ಹ್ಯಾಂ): ಆಕಾಶ ದೀಪ್ ಅವರ ಮಾರಕ ಬೌಲಿಂಗ್ ( 99 ಕ್ಕೆ 6) ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ನಿನ್ನೆ ಇಲ್ಲಿ ಮುಕ್ತಾಯವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 336 ರನ್ ಗಳ ಬೃಹತ್ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಭಾರತ ತಂಡ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿತು. ಇಂಗ್ಲೆಂಡ್ ಪರವಾಗಿ ದ್ವಿತೀಯ ಸರದಿಯಲ್ಲಿ ವಿಕೆಟ್ ಕೀಪರ್ ಜೆಮ್ಮಿ ಸ್ಮಿತ್ ಮಾತ್ರ ಪ್ರತಿರೋಧ ತೋರಿದರು. ಅವರು 88 ರನ್ ಗಳಿಸಿ ಭಾರತದ ಬೌಲರುಗಳನ್ನು ಕೆಲ ಕಾಲ ಕಾಡಿದರು.
ಉಳಿದಂತೆ ಬೆನ್ ಸ್ಟೋಕ್ಸ್, ಬೆನ್ ಡಕೆಟ್ ಆಟಕ್ಕೆ ಕುದುರಿಕೊಂಡರು ಎನ್ನುವಷ್ಟರಲ್ಲಿ ನಿರ್ಗಮಿಸಿ ಆ ತಂಡಕ್ಕೆ ನಿರಾಸೆ ಮೂಡಿಸಿದರು. ಭಾರತದ ಪರವಾಗಿ ಆಕಾಶ್ ದೀಪ್ 6 ವಿಕೆಟ್ ಪಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ತಂಡದ ನಾಯಕ ಶುಭಮಾನ್ ಗಿಲ್ ಸಹಜವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.




