ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಊಹಾಪೋಹಗಳ ನಡುವೆ ಮಹಾಯುತಿ ಮೈತ್ರಿಕೂಟದ ಸಿಎಂ ಅಭ್ಯರ್ಥಿಯನ್ನು ನಾಳೆ ನಿರ್ಧರಿಸಲಾಗುವುದು ಎಂದು ಹಂಗಾಮಿ ಸಿಎಂ ಏಕನಾಥ್ ಶಿಂಧೆ ಭಾನುವಾರ ತಿಳಿಸಿದ್ದಾರೆ.
ತಮ್ಮ ಗ್ರಾಮದಿಂದ ವಾಪಸ್ಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಯುತಿಯ ಮೂವರೂ ಮಿತ್ರರು ಉತ್ತಮ ತಿಳುವಳಿಕೆಯನ್ನು ಹೊಂದಿರುವುದರಿಂದ ನಿರ್ಧಾರಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಅವರು ಒತ್ತಿ ಹೇಳಿದರು.
ನಾನು ಈಗ ಆರಾಮಾಗಿದ್ದೇನೆ. ನಾನು ಚುನಾವಣೆಯ ಒತ್ತಡದ ಬಳಿಕ ವಿಶ್ರಾಂತಿ ಪಡೆಯಲು ಹೋಗಿದ್ದೆ. ಸಿಎಂ ಆಗಿದ್ದ ಕಾರಣ ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ರಜೆ ತೆಗೆದುಕೊಂಡಿಲ್ಲ. ಇದರಿಂದ ನಾನು ಅನಾರೋಗ್ಯಕ್ಕೆ ಒಳಗಾದೆ ಎಂದರು.
ಇದೇ ವೇಳೆ ಜನಾದೇಶ ಮತ್ತು ಪಕ್ಷದ ನಾಯಕತ್ವಕ್ಕೆ ತಮ್ಮ ಬೇಷರತ್ ಬೆಂಬಲವನ್ನು ಘೋಷಿಸಿದ ಅವರು, ಈ ಸರ್ಕಾರವು ಜನರ ಮಾತನ್ನು ಕೇಳುತ್ತದೆ. ನಾನು ಈಗಾಗಲೇ ಪಕ್ಷದ ನಾಯಕತ್ವಕ್ಕೆ ನನ್ನ ಬೇಷರತ್ ಬೆಂಬಲವನ್ನು ನೀಡಿದ್ದೇನೆ ಮತ್ತು ಅವರ ನಿರ್ಧಾರವನ್ನು ಬೆಂಬಲಿಸುತ್ತೇನೆ.
ಕಳೆದ ಎರಡೂವರೆ ವರ್ಷಗಳ ನಮ್ಮ ಸರ್ಕಾರದ ಕೆಲಸ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿವೆ. ಇದರಿಂದಾಗಿ ಜನರು ನಮಗೆ ಐತಿಹಾಸಿಕ ಜನಾದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.