ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ದು, ಚುನಾವಣಾ ಅಕ್ರಮದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯ ಚುನಾವಣ ಆಯೋಗಕ್ಕೆ ದೂರು ನೀಡಿದ್ದಾರೆ.
ರಾಜ್ಯ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ ಬಳಿಕ ಸಿದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಲೋಕಸಭಾ ಚುನಾವಣೆಯಲ್ಲಿ ಮಹಾದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ.
ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದೇವೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಯಾವ ರೀತಿ ಚುನಾವಣಾ ಅಕ್ರಮ ನಡೆದಿದೆ ಎಂಬುದನ್ನು ರಾಹುಲ್ ಗಾಂಧಿ ಈಗಾಗಲೇ ವಿವರಿಸಿದ್ದಾರೆ.
ನಮ್ಮ ಬಳಿ ಇರುವ ದಾಖಲೆಗಳನ್ನು ತಂದು ಕೊಡುತ್ತೇವೆ. ಈ ಹಿಂದೆಯೂ ನಾವು ಹೇಳಿದ್ದೆವು. ಇಂದು ಬೆಂಗಳೂರಿನಲ್ಲಿ ನಡೆದ ಈ ಪ್ರತಿಭಟನೆ ಇಡೀ ರಾಷ್ಟ್ರದ ಗಮನ ಸೆಳೆದಿದೆ.
ಇದನ್ನು ಇಲ್ಲಿಗೆ ನಿಲ್ಲಿಸಲ್ಲ. ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು. ಯಾವ ಕ್ಷೇತ್ರದಲ್ಲೇ ಮತಗಳ್ಳತನವಾಗಿರಲಿ ಈ ಬಗ್ಗೆ ತನಿಖೆಯಾಗಲಿ ಎಂದರು.




