ತುರುವೇಕೆರೆ: ತಾಲ್ಲೂಕಿನ ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಸಿದ್ದಲಿಂಗಪ್ಪ ಬಣ 10 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿ ಜಯಗಳಿಸಿದೆ.
ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ತಾಲ್ಲೂಕಿನಾದ್ಯಂತ ಭಾರೀ ಕುತೂಹಲ ಕೆರಳಿಸಿತ್ತು. ಕೊಡಗೀಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ಬಾರಿ ನಿರ್ದೇಶಕರಾಗಿದ್ದ ಸಿದ್ದಲಿಂಗಪ್ಪ ಅವರು ತುರುವೇಕೆರೆ ತಾಲೂಕಿನಿಂದ ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಮತ್ತೊಮ್ಮೆ ಕೊಡಗೀಹಳ್ಳಿ ಸಹಕಾರ ಸಂಘದ ನಿರ್ದೇಶಕರಾಗಿ ಸಿದ್ದಲಿಂಗಪ್ಪ ಆಯ್ಕೆಯಾಗುವುದನ್ನು ತಡೆಯಲು ಭಾರೀ ರಾಜಕೀಯ ಕಸರತ್ತುಗಳು, ತಂತ್ರಗಳು ನಡೆದಿತ್ತು. ಆದರೆ ಸಂಘದ ಅಭಿವೃದ್ದಿಗೆ ಸಿದ್ದಲಿಂಗಪ್ಪ ಮಾಡಿದ ಕೆಲಸಗಳು ಮತ್ತೊಮ್ಮೆ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲು ನೆರವಾಗಿದೆ. ಇದಲ್ಲದೆ ಸಿದ್ದಲಿಂಗಪ್ಪ ಬಣದಲ್ಲಿ ಸಿದ್ದಲಿಂಗಪ್ಪನವರೂ ಸೇರಿದಂತೆ 10 ಮಂದಿ ಜಯಸಾಧಿಸುವ ಮೂಲಕ ಮತ್ತೊಮ್ಮೆ ಕೊಡಗೀಹಳ್ಳಿ ಸಹಕಾರ ಸಂಘದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 1758 ಮಂದಿ ಮತದಾರರಿದ್ದು, ಚುನಾವಣೆಯಲ್ಲಿ 1650 ಮಂದಿ ಮತ ಚಲಾಯಿಸಿದ್ದಾರೆ. ಸಂಘದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ 23 ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ 3 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಸಾಲಗಾರರ ಕ್ಷೇತ್ರದಿಂದ 11 ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಬ್ಬರು ಮಾತ್ರ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಅಭಿವೃದ್ದಿ ಅಧಿಕಾರಿ ಡಿ.ಹೆಚ್. ಶ್ರೀನಿವಾಸ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಕೊಡಗೀಹಳ್ಳಿ ಸಂಘದ ಕಾರ್ಯದರ್ಶಿ ಮಹೇಶ್ವರ್ ಉಪಸ್ಥಿತರಿದ್ದರು.
ಸಾಲಗಾರರ ಕ್ಷೇತ್ರದಿಂದ ಸಿದ್ದಲಿಂಗಪ್ಪ ಬಣದ ಸಾಮಾನ್ಯ ಕ್ಷೇತ್ರದಿಂದ ಕೊಡಗೀಹಳ್ಳಿ ಸಿದ್ದಲಿಂಗಪ್ಪ (1097 ಮತ), ಗುಡ್ಡೇನಹಳ್ಳಿ ಆರ್.ನಂಜುಂಡಪ್ಪ (896), ಸೋಮೇನಹಳ್ಳಿ ಕೆ.ಬಿ.ದೇವರಾಜ್ (849), ಕಲ್ಕೆರೆ ಕೆ.ಟಿ. ಪುಟ್ಟಸ್ವಾಮಿಗೌಡ (843), ಪರಿಶಿಷ್ಟ ಜಾತಿ ಮೀಸಲಿನಿಂದ ಕೊಡಗೀಹಳ್ಳಿ ಚಿಕ್ಕಹನುಮಯ್ಯ (768), ಪರಿಶಿಷ್ಟ ಪಂಗಡ ಮೀಸಲಿನಿಂದ ಹಾವಾಳ ಹೆಚ್.ವಿ.ಮುನಿರಾಜು (765), ಮಹಿಳಾ ಮೀಸಲಿನಿಂದ ಕೊಟ್ಟೂರನಕೊಟ್ಟಿಗೆಯ ಎಂ.ಬಿ. ಜಯಲಕ್ಷ್ಮಮ್ಮ (828), ದೊಡ್ಡಾಘಟ್ಟ ಮಂಜಮ್ಮ (801), ಬಿಸಿಎಂ(ಎ) ವಿಭಾಗದಿಂದ ಸೂಳೆಕೆರೆಯ ವೆಂಕಟೇಶ್ (844), ಬಿಸಿಎಂ(ಬಿ) ವಿಭಾಗದಿಂದ ಹಾವಾಳದ ಹೆಚ್.ಬಿ. ಯದುಕುಮಾರ್ (940) ಹಾಗೂ ಎದುರಾಳಿ ಬಣದ ಸಾಲಗಾರರ ಕ್ಷೇತ್ರದಿಂದ ತುರುವೇಕೆರೆಯ ಎಂ.ಎನ್. ಶರತ್ ಕುಮಾರ್ (ಸಾಮಾನ್ಯ ಕ್ಷೇತ್ರ) (826), ಸಾಲಗಾರರಲ್ಲದ ಕ್ಷೇತ್ರದಿಂದ ತುರುವೇಕೆರೆಯ ಕೃಷ್ಣ ಅಜ್ಜಪ್ಪ (89) ಮತಗಳನ್ನು ಗಳಿಸಿ ಜಯಗಳಿಸಿದರು.
ಅಭ್ಯರ್ಥಿಗಳು ಜಯಗಳಿಸಿದ ಘೋಷಣೆ ಹೊರಬರುತ್ತಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ, ವಿಜೇತರಿಗೆ ಪುಷ್ಪಾಹಾರ ಹಾಕಿ ಸಂಭ್ರಮಿಸಿದರು. ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದವರನ್ನು ಪಪಂ ಅಧ್ಯಕ್ಷೆ ಸ್ವಪ್ನ ನಟೇಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಪಪಂ ನಾಮನಿರ್ದೇಶಿತ ಸದಸ್ಯ ರುದ್ರೇಶ್, ಕೊಟ್ಟೂರನಕೊಟ್ಟಿಗೆ ಗೋವಿಂದರಾಜು, ಕೊಡಗೀಹಳ್ಳಿ ಪುಟ್ಟರಾಜು ಸೇರಿದಂತೆ ಅಭಿಮಾನಿಗಳು, ಬೆಂಬಲಿಗರು ಅಭಿನಂದಿಸಿದರು. ತೀವ್ರ ಬಿರುಸಿನಿಂದ ಕೂಡಿದ್ದ ಚುನಾವಣೆಯಾದ್ದರಿಂದ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು. ಚುನಾವಣೆ ಶಾಂತಿಯುತವಾಗಿ ನೆರವೇರಿತು.
ವರದಿ: ಗಿರೀಶ್ ಕೆ ಭಟ್




