ಪಲಾಮು(ಜಾರ್ಖಂಡ್): ಒಂದು ಕಾಲದಲ್ಲಿ ಅಫೀಮಿಗೆ ಕುಖ್ಯಾತವಾಗಿದ್ದ ಜಿಲ್ಲೆಯೊಂದು ಈಗ ಜೇನುಕೃಷಿಯಿಂದ ಉತ್ತಮ ಬದಲಾವಣೆಗೆ ಸಾಕ್ಷಿಯಾಗಿದೆ.
ಜಾರ್ಖಂಡ್ ರಾಜ್ಯದ ಪಲಾಮು ಜಿಲ್ಲೆಯ ಮನಾಟು ಪ್ರದೇಶದಲ್ಲಿನ ಬುಡಕಟ್ಟು ಕುಟುಂಬಗಳು ದೊಡ್ಡ ಪ್ರಮಾಣದಲ್ಲಿ ಜೇನು ಉತ್ಪಾದನೆ ಆರಂಭಿಸಿವೆ. ಭಿತದಿಹಾದಲ್ಲಿ ಸುಮಾರು 28 ಬುಡಕಟ್ಟು ಕುಟುಂಬಗಳು ಮತ್ತು ದಲ್ದಾಲಿಯಾ ಪ್ರದೇಶದಲ್ಲಿ 26 ಬುಡಕಟ್ಟು ಕುಟುಂಬಗಳು ಜೇನು ಸಾಕಣೆಯಲ್ಲಿ ಸದ್ಯ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಜೇನುತುಪ್ಪದ ಮಾಧುರ್ಯ ಜನರ ಮೇಲಿದ್ದ ಅಫೀಮು ಕಳಂಕವನ್ನು ಅಳಿಸುತ್ತಿದೆ.
“ಜೇನು ಸಾಕಾಣಿಕೆ ನಂತರ ಅವರ ಸಮಸ್ಯೆಗಳು ಒಂದೊಂದಾಗಿ ದೂರವಾಗತೊಡಗಿವೆ. ಮೂರು ತಿಂಗಳ ಹಿಂದೆ, ತೋಟಗಾರಿಕೆ ಇಲಾಖೆ ಮತ್ತು ಜಾರ್ಖಂಡ್ ಸ್ಟೇಟ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ (ಜೆಎಸ್ಎಲ್ಪಿಎಸ್) ಮೂಲಕ ಜೇನುಸಾಕಣೆಗೆ ಸಂಪರ್ಕ ಕಲ್ಪಿಸಿದರು. ಪ್ರತಿ ಕುಟುಂಬವು ಸುಮಾರು 70 ಕೆಜಿ ಜೇನುತುಪ್ಪವನ್ನು ಉತ್ಪಾದಿಸುತ್ತದೆ” ಎಂಬ ಮಾಹಿತಿಯನ್ನು ಭೀತಡಿಹಾಳದ ಸರಿತಾದೇವಿ ನುಡಿದರು.
ಈ ಪ್ರದೇಶದಲ್ಲಿ ಜೇನುಸಾಕಣೆಯ ಕುರಿತು ಪಲಾಮು ಜಿಲ್ಲಾ ತೋಟಗಾರಿಕೆ ಅಧಿಕಾರಿ ಶೈಲೇಂದ್ರ ಕುಮಾರ್ ಮಾತನಾಡಿ, “ಕೇವಲ ಮೂರು ತಿಂಗಳಲ್ಲಿ ಧನಾತ್ಮಕ ಫಲಿತಾಂಶಗಳು ಬರುತ್ತಿದೆ. ಜೇನು ಸಾಕಣೆಯಿಂದ ಬುಡಕಟ್ಟು ಕುಟುಂಬಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಮುಂದಿನ ದಿನಗಳಲ್ಲಿ ಜೇನು ಕೃಷಿಯ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜೇನುಸಾಕಣೆಗೆ ಗ್ರಾಮಸ್ಥರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ಹೆಚ್ಚುವರಿ ಹಣವನ್ನು ಕೋರಲಾಗುವುದು” ಎಂದು ತಿಳಿಸಿದರು.
ಜೆಎಸ್‌ಎಲ್‌ಪಿಎಸ್‌ನ ಮನತು ಬಿಪಿಒ ಕುಮಾರಿ ನಮ್ರತಾ ಮಾತನಾಡಿ, “ಪ್ರಸ್ತುತ ಸ್ಥಳೀಯವಾಗಿ ಗ್ರಾಮಸ್ಥರು ಜೇನು ಮಾರಾಟ ಮಾಡುತ್ತಿದ್ದಾರೆ. ನಂತರ ಅದನ್ನು ಪಲಾಶ್‌ಗೆ ಜೋಡಿಸಿ ಮಾರುಕಟ್ಟೆಯನ್ನು ಸಹ ಲಭ್ಯಗೊಳಿಸಲಾಗುವುದು” ಎಂದು ಅವರು ಹೇಳಿದರು.