ಬೆಂಗಳೂರು : ಬಿಜೆಪಿಯವರು ನೂರು ಜನ್ಮ ತಾಳಿದರೂ ಐದು ಗ್ಯಾರಂಟಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿ ಇಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಹಾಗೂ ಕಾಂಗ್ರೆಸ್ ಜನಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ, ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಭನ ಪಾದಭಜನೆ ಸುಖವಯ್ಯಾ ಎನ್ನುವಂತೆ ಪದ್ಮನಾಭನಗರದಲ್ಲಿ ಇಂದು ನಮ್ಮ ಕಾರ್ಯಕರ್ತರ ಹುಮ್ಮಸ್ಸು, ಶಕ್ತಿ, ಸ್ಫೂರ್ತಿ ನೋಡುವುದೇ ಒಂದು ಭಾಗ್ಯ.
ರಾಜ್ಯದಲ್ಲಿ ನಾವು ಜಾರಿಗೆ ತಂದ ಐದು ಗ್ಯಾರಂಟಿಗಳ ಪ್ರಯೋಜನಗಳೇನು? ಅದರ ಅವಶ್ಯಕತೆಗಳೇನು? ಎಂಬುದು ತುಂಬಾ ಮುಖ್ಯವಾಗುತ್ತದೆ. ರಾಜಕಾರಣ ಎಂದ ಮೇಲೆ ಸೋಲು, ಗೆಲುವು ಎರಡು ಇರುತ್ತವೆ.ಕಾಂಗ್ರೆಸ್ ಪಕ್ಷ ಯಾವಾಗಲೂ ಜನತೆಯ ಬದುಕಿನ ಮೇಲೆ ಗಮನ ಹರಿಸುತ್ತದೆ.
ಆದರೆ ಬಿಜಪಿಯವರು ಭಾವನೆ ಮೇಲೆ ರಾಜಕೀಯ ಮಾಡುತ್ತಾರೆ. ಅವರ ಕಾಲದಲ್ಲಿ ಜನರಿಗೆ ಉಪಯೋಗವಾಗುವ ಯಾವುದೇ ಯೋಜನೆಗಳನ್ನು ನೀಡಿಲ್ಲ. ಆದರೆ ನಮ್ಮ ಜನಪರ ಗ್ಯಾರಂಟಿಗಳು ಜನರ ಬದುಕು ಬದಲಿಸಿದ್ದು, ಇಂದು ಅವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಬಿಜೆಪಿಯವರು ನೂರು ಜನ್ಮ ತಾಳಿದರೂ ನಮ್ಮ ಐದು ಗ್ಯಾರಂಟಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ.ದೇವರು ವರನೂ ಕೊಡೋದಿಲ್ಲ, ಶಾಪನೂ ಕೊಡೋದಿಲ್ಲ ಅವಕಾಶ ಮಾತ್ರ ಕೊಡ್ತಾನೆ. ಅದರಂತೆ ರಾಜ್ಯದ ಜನರು ನಮಗೆ ಅವರ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಅದನ್ನು ನಾವು ನಿಷ್ಠೆಯಿಂದ ಪಾಲಿಸುತ್ತೇವೆ ಎಂದು ಹೇಳಿದರು.