ನವದೆಹಲಿ: ಎವರೆಸ್ಟ್, ಎಂಡಿಎಚ್ ಬ್ರಾಂಡ್ ನ ನಾಲ್ಕು ಮಸಾಲೆ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಎಂಬ ಕ್ಯಾನ್ಸರ್ ಉಂಟು ಮಾಡುವ ಕೀಟನಾಶಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಈ ಪದಾರ್ಥಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಗ್ರಾಹಕರು ಎಂಡಿಹೆಚ್ ಮತ್ತು ಎವರೆಸ್ಟ್ ಬ್ರಾಂಡ್ ನಾಲ್ಕು ಮಸಾಲೆ ಉತ್ಪನ್ನಗಳನ್ನು ಖರೀದಿಸಬಾರದು.ಇವುಗಳನ್ನು ವ್ಯಾಪಾರಿಗಳು ಮಾರಾಟ ಮಾಡಬಾರದು ಎಂದು ಹಾಂಗ್ ಕಾಂಗ್ ಆಹಾರ ಸುರಕ್ಷತಾ ಕೇಂದ್ರ ಸೂಚಿಸಿದೆ. ಸಿಂಗಾಪುರದಲ್ಲಿ ಕೂಡ ಆಹಾರ ಸುರಕ್ಷತಾ ಏಜೆನ್ಸಿ ಈ ಉತ್ಪನ್ನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಎಂಡಿಹೆಚ್ ನ ಮದ್ರಾಸ್ ಕರ್ರಿ ಪೌಡರ್, ಎಂಡಿಹೆಚ್ ಸಾಂಬಾರ್ ಮಸಾಲೆ ಮಿಕ್ಸ್ಡ್ ಪೌಡರ್, ಎಂಡಿಹೆಚ್ ಕರ್ರಿ ಪೌಡರ್ ಮಿಕ್ಸ್ ಮಸಾಲೆ, ಎವರೆಸ್ಟ್ ಫಿಶ್ ಕರ್ರಿ ಮಸಾಲೆಯಲ್ಲಿ ಕೀಟನಾಶಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದೆ ಎಂದು ಹಾಂಗ್ ಕಾಂಗ್ ಆಹಾರ ಸುರಕ್ಷತೆ ಕೇಂದ್ರ ತಿಳಿಸಿದೆ.
ಭಾರತದ ಮಸಾಲೆ ಪದಾರ್ಥಗಳ ಮಾರಾಟಕ್ಕೆ ನಿಷೇಧ ಹೇರಿದ ಮಾಹಿತಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭಾರತೀಯ ಮಸಾಲೆ ಮಂಡಳಿ ನಿರ್ದೇಶಕರಾದ ಎ.ಬಿ. ರೆಮಾ ಶ್ರೀ ಅವರು ಹೇಳಿದ್ದಾರೆ.
ಕೀಟನಾಶಕ ಅಂಶ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಎರಡು ಬ್ರಾಂಡ್ ಗಳ ಮಸಾಲೆ ಪದಾರ್ಥಗಳ ಗುಣಮಟ್ಟ ಪರೀಕ್ಷೆಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕ್ರಮ ಕೈಗೊಂಡಿದೆ.