ನವದೆಹಲಿ: ಪ್ರತಿ ಕುಟುಂಬವು 3 ಮಕ್ಕಳನ್ನು ಹೊಂದಿರಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ಒಂದು ಸಮುದಾಯದ ಜನಸಂಖ್ಯೆಯು ಶೇ 2.1 ಕ್ಕಿಂತ ಕಡಿಮೆಯಾದರೆ ಅಂತಹ ಸಮಾಜವು ಅಳಿವಿನಂಚಿಗೆ ಹೋಗುತ್ತದೆ.
ಹಾಗಾಗಿ ನಾವು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು. ಸಮಾಜದ ಉಳಿವಿಗೆ ಇದು ಅಗತ್ಯವಾಗಿದೆ ಎಂದು ಭಾಗವತ್ ಹೇಳಿದ್ದಾರೆ.
ಆರ್ಎಸ್ಎಸ್ಗೆ 100 ವರ್ಷ ತುಂಬಿದ ಸಂಭ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ‘ಸಮಾಜದ ಜನಸಂಖ್ಯೆಯು (ಫಲವತ್ತತೆ ದರ) 2.1 ಕ್ಕಿಂತ ಕಡಿಮೆಯಾದರೆ, ಆ ಸಮಾಜವು ಭೂಮಿಯಿಂದ ಕಣ್ಮರೆಯಾಗುತ್ತದೆ ಎಂದು ಆಧುನಿಕ ಜನಸಂಖ್ಯಾ ವಿಜ್ಞಾನವೇ ಹೇಳುತ್ತದೆ.
ಈಗಾಗಲೇ ಈ ರೀತಿಯಲ್ಲಿ ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಹಾಗಾಗಿ ಜನಸಂಖ್ಯೆಯು 2.1 ಕ್ಕಿಂತ ಕಡಿಮೆ ಇರಬಾರದು’ ಎಂದು ಹೇಳಿದ್ದಾರೆ.
‘ಧರ್ಮವು ಪ್ರತಿಯೊಬ್ಬ ವ್ಯಕ್ತಿಯ ಸ್ವಂತ ಆಯ್ಕೆ. ಯಾರು ಯಾರನ್ನೂ ಬಲವಂತವಾಗಿ ಮತಾಂತರಿಸಬಾರದು. ಮತಾಂತರವನ್ನು ನಾವೆಲ್ಲಾ ಸೇರಿ ನಿಲ್ಲಿಸಬೇಕು. ಎರಡನೆಯ ವಿಷಯವೆಂದರೆ ಒಳನುಸುಳುವಿಕೆ. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ನೀತಿ ಮತ್ತು ನಿಯಮಗಳು, ಸೀಮಿತ ಸಂಪನ್ಮೂಲಗಳಿವೆ.
ಆದ್ದರಿಂದ, ಒಳನುಸುಳುವಿಕೆಯನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ಕೂಡಾ ಒಳ ನುಸುಳುವಿಕೆ ನಿಲ್ಲಿಸಲು ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಮೋಹನ್ ಭಾಗವತ್ ಹೇಳಿದರು.




