ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ ಸಿಲುಕಿಕೊಂಡಿದ್ದು, ಪೂರ್ಣ ತನಿಖೆಯಾದರೆ ಸಿಎಂ ರಾಜಿನಾಮೆ ನೀಡಬೇಕಾಗುತ್ತದೆ ಎಂದು ರಕ್ಷಣೆಗೆ ಬಿಜೆಪಿ ವಿರುದ್ದ ಆರೋಪ ಮಾಡುತ್ತಿದ್ದಾರೆ.
ಅವರು ಯಾವುದೇ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ದರಿದ್ದೇವೆ.ಆದರೆ, ರಾಜಕೀಯ ದ್ವೇಷಕ್ಕಾಗಿ ಅಧಿಕಾರ ದುರುಪಯೋಗ ಆಗಬಾರದು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ ಸಿಕ್ಕಿಕೊಂಡಿದೆ. ಅದರ ಹಣ ಚುನಾವಣಾ ರಾಜಕಾರಣಕ್ಕೆ, ಸಾರಾಯಿ ಖರೀದಿಗೆ ಹೋಗಿರುವುದು ಸಿಕ್ಕಿದೆ. ಈ ಬಗ್ಗೆ ಪೂರ್ಣ ತನಿಖೆಯಾದರೆ ಸಿಎಂ ರಾಜಿನಾಮೆ ಕೊಡಬೇಕಾಗುತ್ತದೆ ಎಂದು ಬಿಜೆಪಿಯ ಅವಧಿಯಲ್ಲಿ 21 ಹಗರಣ ಆಗಿದೆ ಎಂದು ಆರೋಪಿಸಿದ್ದಾರೆ.
ಬಹಳ ಕಷ್ಟ ಪಟ್ಟು ಬಿಜೆಪಿಯ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಈಗ ಕಣ್ಣು ತೆರೆದು ನೋಡುತ್ತಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಾರೆ. ಯಾವುದೆ ತನಿಖೆ ನಡೆಸಲಿ ನಾವು ಎದುರಿಸಲು ಸಿದ್ದರಿದ್ದೇವೆ. ಆದರೆ, ತನಿಖೆ ಹೆಸರಲ್ಲಿ ಅಧಿಕಾರ ದುರ್ಬಳಕೆ ಆಗಬಾರದು, ಅವರು ಮಾಡಿರುವ ಆರೋಪಕ್ಕೆ ದಾಖಲೆ ನೀಡಬೆಕಿತ್ತು ಎಂದು ಹೇಳಿದರು.
ನನ್ನ ವಿರುದ್ದ ಮಾಡಿರುವ ಆರೋಪದಲ್ಲಿ ನಾನು ಎಪಿಎಂಸಿ ಸಚಿವನಾಗಿರಲಿಲ್ಲ ಆಗ ಗೃಹ ಸಚಿವನಾಗಿದ್ದೆ, ಎಪಿಎಂಸಿ ಪ್ರಕರಣದಲ್ಲಿ ತನಿಖೆ ನಡೆಸಿ ಬ್ಯಾಂಕಿನವರಿಂದ 48 ಕೋಟಿ ರೂ. ಜೊತೆಗೆ ಬಡ್ಡಿ ಸಮೇತ 52 ಕೋಟಿ ರೂ ವಸೂಲಿ ಮಾಡಲಾಗಿತ್ತು.
ಬೋವಿ ನಿಗಮದಲ್ಲಿ ಅವ್ಯವಹಾರ ಆಗಿದ್ದಾಗ ಅದನ್ನು ಸಿಐಡಿ ತನಿಖೆಗೆ ನಾವೇ ವಹಿಸಿದ್ದೇವೆ. ಅದರ ತನಿಖೆ ನಡೆಯುತ್ತಿದೆ. ಗಂಗಾ ಕಲ್ಯಾಣ ಯೋಜನೆ ದುರುಪಯೋಗದ ಆರೋಪ ಕೇಳಿ ಬಂದಾಗ ನಾನೇ ಸದನದಲ್ಲಿ ಸಿಐಡಿ ತನಿಖೆಗೆ ನೀಡಿದ್ದೇನೆ. ಅದರ ತನಿಖೆ ಕೊನೆ ಹಂತಕ್ಕೆ ಬಂದಿದೆ.
ನಮ್ಮ ವಿರುದ್ದ 40% ಆರೊಪವನ್ನು ಮಾಡಿದ್ದರು. ಇದವರೆಗೂ ಯಾವುದೇ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ನೊಟಿಸ್ ಕೊಟ್ಟಿಲ್ಲ. ರಾಜಕೀಯ ಉದ್ಯೇಶದಿಂದ ಆಯೊಗ ಮಾಡಿದರೆ, ತನಿಖೆ ನಡೆಸಿದರೆ ಹೀಗೆ ಆಗುವುದು ಎಂದು ತಿರುಗೇಟು ನೀಡಿದರು.
ಇವತ್ತು ವಾಲ್ಮೀಕಿ ನಿಗಮ ಒಂದೇ ಅಲ್ಲ ಎಲ್ಲ ಇಲಾಖೆಗಳಲ್ಲಿ ಹಗರಣ ಹೊರ ಬರುತ್ತಿವೆ ಕೊಮುಲ್ ನಿಂದ ಹಿಡಿದು ಪ್ರವಾಸೋದ್ಯಮ ಇಲಾಖೆ ಹಗರಣ ಎಲ್ಲವೂ ಹೊರ ಬರುತ್ತಿವೆ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಅನ್ನುವಂತಾಗಿದೆ.
ಸ್ವಾತಂತ್ರ್ಯಾ ನಂತರ ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಕಾಂಗ್ರೆಸ್. ಅವರು ಯಾವುದೇ ತನಿಖೆ ನಡೆಸಲಿ ನಾವು ಎದುರಿಸುತ್ತೇವೆ. ನಾವು ಅವರ ರೀತಿ ಇಡಿ ಯಾಕೆ, ಸಿಬಿಐ ಯಾಕೆ ಬಂತು ಅಂತ ಕೇಳುವುದಿಲ್ಲ.
ನಾವು ಅವರ ಹಾಗೆ ಅಂಜುಬುರುಕರಲ್ಲ. ಪೊಲಿಸ್ ಇಲಾಖೆಯನ್ನು ತಮ್ಮ ವಿರುದ್ದ ಬಂದಿರುವ ಆರೋಪದಿಂದ ರಕ್ಷಣೆ ಪಡೆಯಲು ದುರ್ಬಳಕೆ ಮಾಡಿಕೊಂಡರೆ ಆ ಹಗರಣವೂ ಶೀಘ್ರವೇ ಹೊರ ಬರಲಿದೆ ಎಂದು ಹೇಳಿದರು.
ಇಡಿ ತನಿಖೆ ಬಗ್ಗೆ ಇವರಿಗೆ ಯಾಕೆ ಭಯ. ಈಗಾಗಲೇ ಇವರ ವಿರುದ್ದ ಸುಮಾರು 40 ಕ್ಕಿಂತ ಹೆಚ್ಚು ಪ್ರಕರಣಗಳು ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ.
ಬಿಬಿಎಂಪಿಯಲ್ಲಿ ಗುತ್ತಿಗೆದಾರಿಗೆ ಶೇ 68% ರಷ್ಟು ಹೆಚ್ಚಿಗೆ ನೀಡಿದ್ದಾರೆ. ಇವೆಲ್ಲವೂ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಯವರು ಶುಕ್ರವಾರ ಅಧಿವೇಶನ ಕೊನೆ ಗಳಿಗೆಯಲ್ಲಿ ಆರೋಪ ಮಾಡಿ ವಿರೋಧ ಪಕ್ಷದವರು ಬಾಯಿಮುಚ್ಚಿಕೊಂಡಿದ್ದಾರೆ ಎನ್ನುತ್ತಾರೆ.
ನಾವು ಬಾಯಿ ಮುಚ್ಚಿಕೊಂಡು ಕುಳಿತಿಲ್ಲ. ಸದನದಲ್ಲಿ ಪ್ರತಿಪಕ್ಷದ ಶಾಸಕರನ್ನು ಟಾರ್ಗೆಟ್ ಮಾಡಿದರೂ ಯಾರೂ ಬಗ್ಗುವುದಿಲ್ಲ. ಅವರ ಮುಖಕ್ಕೆ ಮಸಿ ಬಳಿದಿದೆ.
ಅದಕ್ಕೆ ಎಲ್ಲರೂ ಒಂದು ಎಂದು ತೋರಿಸಲು ಹೊರಟಿದ್ದಾರೆ. ಭ್ರಷ್ಟಾಚಾರದ ಬ್ರಹ್ಮ ಯಾರು ಅಂತ ಎಲ್ಲರಿಗೂ ಗೊತ್ತಾಗಿದೆ. ಅವರು ಈಗ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ತನಿಖೆ ನಂತರ ಸತ್ಯ ಹೊರಬರಲಿದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ದದ ಹೋರಾಟ ಸದನದ ಹೊರಗೆ ಹಾಗೂ ಒಳಗೆ ಮುಂದುವರೆಯಲಿದೆ ಎಂದು ಹೇಳಿದರು.