ಹುಬ್ಬಳ್ಳಿ: ವಿವಿಧ ಪ್ರಕರಣಗಳಲ್ಲಿ ಪಾಲ್ಗೊಂಡ ಹುಬ್ಬಳ್ಳಿ-ಧಾರವಾಡ ಅವಳಿನಗರ ೪೫ ಜನರನ್ನು ೬ ತಿಂಗಳವರೆಗೆ ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹೇಳಿದರು.
ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ಕೊಲೆ(೦೮), ಕೊಲೆಗೆ ಪ್ರಯತ್ನ(೧೨), ಸುಲಿಗೆ(೦೩), ಮನೆ ಗಳ್ಳತನ(೦೧), ಮಾನಭಂಗ(೦೧), ಅಪಹರಣ(೦೧), ಎನ್‌ಡಿಪಿಎಸ್ ಕಾಯ್ದೆ(೦೯), ಅಬಕಾರಿ ಕಾಯ್ದೆ(೦೧), ಓಸಿ ಮಟ್ಕಾ/ಕ್ರಿಕೆಟ್ ಬೆಟ್ಟಿಂಗ್ ಜೂಜಾಟ(೦೬), ಹಲ್ಲೆ(೦೧), ದೊಂಬಿ(೦೨) ಪ್ರಕರಣದಲ್ಲಿ ಪಾಲ್ಗೊಂಡ ಒಟ್ಟು ೪೫ ಮಂದಿಯನ್ನು ೧೯೯೬, ೫೫ ಕಾಯ್ದೆಯಡಿ ಗಡಿಪಾರು ಮಾಡಲಾಗಿದೆ ಎಂದರು.
ಸಾಮಾನ್ಯವಾಗಿ ಚುನಾವಣೆ, ಗಲಭೆಗಳಂತ ಪ್ರಕರಣ ನಡೆದಾಗ ಗಡಿಪಾರು ಮಾಡಲಾಗುತ್ತಿತ್ತು. ಈಗ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ಉದ್ದೇಶದಿಂದ ಮಾಡಲಾಗುತ್ತಿದೆ. ಆದ್ದರಿಂದ ಗಡಿಪಾರು ಮಾಡುವ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
೪೫ ಅಪರಾಧಿಗಳನ್ನು ಬೀದರ್, ಯಾದಗಿರಿ, ಕಲಬುರಗಿ, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರಗಳಿಗೆ ಗಡಿಪಾರು ಮಾಡಲಾಗಿದೆ. ಗಡಿಪಾರಾದ ಅಪರಾಧಿಗಳು ಜಿಲ್ಲೆ ನಿಗದಿ ಪಡಿಸಿದ ಠಾಣೆಯಲ್ಲಿ ವರದಿ ಮಾಡಿಕೊಳ್ಳಬೇಕು. ಆದೇಶ ಉಲ್ಲಂಘಿಸಿ ಮತ್ತೆ ನಗರಕ್ಕೆ ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಇನ್ನೂ ಹಲವರು ಅಪರಾಧಿಗಳು ನಾಪತ್ತೆಯಾಗಿದ್ದು, ಅವರಿಗೆ ಶೋಧ ನಡೆಸಲಾಗು ತ್ತಿದೆ. ಅಷ್ಟೇ ಅಲ್ಲದೇ ಗುಂಡಾ ಕಾಯ್ದೆ ಹಾಕಲು ಸಹ ಠಾಣಾ ವ್ಯಾಪ್ತಿಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲು ಠಾಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ರವೀಶ ಸಿ.ಆರ್., ಮಹಾನಿಂಗ ನಂದಗಾಂವಿ ಸೇರಿದಂತೆ ಎಸಿಪಿಗಳು, ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಪಾಲ್ಗೊಂಡಿದ್ದರು.
ವರದಿ : ಸುಧೀರ ಕುಲಕರ್ಣಿ