ಶಿವಮೊಗ್ಗ: ಸರ್ಕಾರಿ ಉದ್ಯೋಗಕ್ಕಾಗಿ ನಕಲಿ ಅಂಕಪಟ್ಟಿ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು ದಾವಣಗೆರೆ ಜಿಲ್ಲೆಯ ಇಬ್ಬರು ಎರಡು ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 4ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ, ಗುರುವಾರ ಶಿಕ್ಷೆ ಪ್ರಕಟಿಸಿತು.
ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದ ಗಣೇಶ್ ಗೌಡ (23) ಮತ್ತು ಕಂದಗಲ್ ಗ್ರಾಮದ ಬಿ.ಬಿ.ಗೀರೀಶ್ ಶಿಕ್ಷೆಗೊಳಗಾದ ಅಪರಾಧಿಗಳು.
ಪ್ರಕರಣವೇನು?: 2016ರಲ್ಲಿ ಈ ಇಬ್ಬರು ಮೆಸ್ಕಾಂನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಾಗ SSLCಯ ಮೂಲ ಅಂಕಪಟ್ಟಿಯ ಬದಲಾಗಿ ನಕಲಿ ಅಂಕಪಟ್ಟಿ ಸಲ್ಲಿಸಿ ಇಲಾಖೆಗೆ ವಂಚಿಸಿದ್ದಾರೆಂದು ಆರೋಪಿಸಿ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಅಂದಿನ ತನಿಖಾಧಿಕಾರಿ ಇಮ್ರಾನ್ ಬೇಗ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ವಾದ ಅಲಿಸಿದ ನ್ಯಾಯಾಧೀಶ ಶಿವಕುಮಾರ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ತಲಾ 2 ವರ್ಷ ಸಜೆ ಹಾಗೂ 4 ಸಾವಿರ ರೂ ದಂಡ ವಿಧಿಸಿದ್ದಾರೆ.ಸರ್ಕಾರಿ ವಕೀಲರಾದ ಕಿರಣ್ ಕುಮಾರ್ ಹಾಗೂ ರಂಜಿತ್ ಕುಮಾರ್ ವಾದ ಮಂಡಿಸಿದ್ದರು.