ಮುದಗಲ್: ದಿಢೀರನೆ ತೊಗರಿ ಬೆಲೆ ಕುಸಿತ ಕಂಡಿರುವುದರಿಂದ ತೊಗರಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬೆಳೆದ ತೊಗರಿಗೆ ಮಾರುಕಟ್ಟೆಯಲ್ಲಿ ದರ ಕುಸಿದ ಪರಿಣಾಮ ರೈತರಲ್ಲಿ ಆತಂಕ ಮನೆಮಾಡಿದೆ.
ತಾಲ್ಲೂಕಿನಲ್ಲಿ 30625 ಹೆಕ್ಟೇರ್ ಖುಷ್ಕ ಭೂಮಿಯಲ್ಲಿ, 4070 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಮಾಡಿದ್ದಾರೆ.
ಬಂಪರ್ ದರ: ಕಳೆದ ವರ್ಷ ಆರಂಭದಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ ರೂ.12000 ಕ್ಕೆ ಮಾರಾಟವಾಗಿದೆ.
ಆದರೆ ಈ ವೂ ಆರಂಭದಲ್ಲೇ ಪ್ರತಿ ಕ್ವಿಂಟಲ್ ದರ ರೂ. 10500 ಮಾರಾಟವಾಗಿದೆ. ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಲು ರಾಜ್ಯ ಕೃಷಿ ಮಾರಾಟ ಮಂಡಳಿ ಪ್ರತಿ ಕ್ವಿಂಟಲ್‌ಗೆ ರೂ. 7550 ನಿಗದಿಪಡಿಸಿದೆ. ಆದರೆ, ಇನ್ನೂ ಖರೀದಿ ಕೇಂದ್ರ ಆರಂಭಿಸಿಲ್ಲ. ಖರೀದಿ ಕೇಂದ್ರದ ದರಕ್ಕಿಂತ ಮುಕ್ತ ಮಾರುಕಟ್ಟೆಯಲ್ಲೇ ತೊಗರಿಗೆ ಹೆಚ್ಚು ದರ ದೊರೆಯುತ್ತಿರುವುದು ರೈತ ವರ್ಗದ ಖುಷಿಗೆ ಕಾರಣವಾಗಿತ್ತು. ಆದರೆ ಈಗ ಏಕಾಎಕಿಯಾಗಿ ಮಾರುಕಟ್ಟೆಯಲ್ಲಿ ದಿಢೀರನೆ ತೊಗರಿ ದರ ರೂ. 7500 ಗೆ ಇಳಿಕೆಯಾಗಿದೆ. ರೈತರಲ್ಲಿ ಆತಂಕ ಮನೆಮಾಡಿದೆ.
ಇದೆ ದರಕ್ಕೆ ತೊಗರಿ ಮಾರಾಟ ಮಾಡಿದರೆ ರೈತರಿಗೆ ನಷ್ಠವಾಗಿ ಸಾಲಕ್ಕೆ ಗುರಿಯಾಗುವಂತಾಗಿದೆಎಂದು ತೊಗರಿ ಬೆಳೆದ ರೈತ ಲಕ್ಷ್ಮಣ ತಮ್ಮ ಅಳಲು ತೋಡಿಕೊಂಡರು. ಜಮೀನು ಉಳಿಮೆ ಮಾಡಿದಾಗಿನಿಂದ ಬಿತ್ತಿ ಬೆಳೆದು ರಾಶಿಮಾಡಿ ಫಸಲು ಮಾರುಕಟ್ಟೆಗೆ ಸಾಗಿಸಿದ ಖರ್ಚು ಬಾರದಂತಹ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಬಸನಗೌಡ ಹೇಳಿದರು.
ಮುದಗಲ್ ಮತ್ತು ಲಿಂಗಸುಗೂರ ವರ್ತಕರು ಈ ಹಿಂದೆ ಹೆಚ್ಚಿನ ದರಕ್ಕೆ ಖರೀದಿಸಲು ಮುಂದಾಗಿದ್ದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತರು ತೊಗರಿ ತಂದು ಮಾರಾಟಕ್ಕೆ ಮುಂದಾಗಿದ್ದರು. ವರ್ತಕರು ರೈತರಿಂದ ಖರೀದಿ ಮಾಡಿದ ತೊಗರಿಯನ್ನು ಮಹಾರಾಷ್ಟ್ರದ ದಾಲ್‌ಮಿಲ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಇತರ ಕಡೆ ದಾಲ್‌ಮಿಲ್‌ಗಳ ಕೊರತೆ ಇರುವುದರಿಂದ ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದಾರೆ. ಆದರೆ ಈಗ ತೊಗರಿ ದರ ಕಡಿಮೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ತೊಗರಿ ಆವಕ ಕಡಿಮೆಯಾಗಿದೆ.
ವರದಿ: ಮಂಜುನಾಥ ಕುಂಬಾರ