ಬಸವನಬಾಗೇವಾಡಿ : ಈರುಳ್ಳಿ ದರ ಕುಸಿತಕ್ಕೆ ಬೇಸತ್ತ ರೈತರು ಬಸವನ ಬಾಗೇವಾಡಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಮೇಲೆ ಈರುಳ್ಳಿ ಸುರಿದು ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ಗುರುಶಾಂತ ದಾಶ್ಯಾಳ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮವಹಿಸಿದರು.
ಬೆಂಗಳೂರಿನಲ್ಲಿ 2500, ಸಿಗುವ ಈರುಳ್ಳಿಗೆ ಬಸವನಬಾಗೇವಾಡಿ ಮಾರುಕಟ್ಟೆಯಲ್ಲಿ ಕೇವಲ 2300 ಕೇಳುತ್ತಿದ್ದಾರೆ. ಇದರಿಂದ ಕೂಲಿಯೂ ಸಿಗುತ್ತಿಲ್ಲ, ವಿಜಯಪುರದಲ್ಲಿ ಹೆಚ್ಚಿನ ದರಕ್ಕೆ ಈರುಳ್ಳಿ ಮಾರಾಟವಾಗಿದೆ. ಇಲ್ಲೂ ಸೂಕ್ತ ದರ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದರು.
ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ಎಪಿಎಂಸಿಯು ರೈತರ ಬೆಳೆದ ಬೆಳೆಗೆ ಮಾರುಕಟ್ಟೆ ಸ್ಥಳ ಮಾತ್ರ ಒದಗಿಸುತ್ತದೆ. ಎಪಿಎಂಸಿ ದರ ನಿಗದಿ ಪಡಿಸುವುದಿಲ್ಲ, ಯಾವುದೇ ವ್ಯಾಪಾರಸ್ಪರಿಂದ ರೈತರಿಗೆ ತೊಂದರೆಯಾದರೆ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ದರವು ಬೇಡಿಕೆ ಮತ್ತು ಪೂರೈಕೆ ಮೇಲೆ ಅವಲಂಬಿಸಿದೆ. ಇಂದು ಈರುಳ್ಳಿ ಎಲ್ಲೆಡೆ ಹೆಚ್ಚು ಪೂರೈಕೆಯಾಗಿದ್ದರಿಂದ ಬೆಲೆ ಕಡಿಮೆಯಾಗಿದೆ. ಇಲ್ಲಿಯ ಖರೀದಿದಾರರು ಸಹ ದರ ಇಳಿಸಿದ್ದಾರೆ ಅಷ್ಟೇ, ಉತ್ತಮ ಈರುಳ್ಳಿಗೆ ಉತ್ತಮ ಬೆಲೆ ನೀಡುವಂತೆ ಖರೀದಿದಾರರಿಗೆ ನಾವು ಹೇಳುತ್ತೇನೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. .
ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಜು ರಾಠೋಡ, ಅಧೀಕ್ಷಕ ಆರ್.ಬಿ.ಬಿರಾದಾರ, ಮಾರುಕಟ್ಟೆ ಹಿರಿಯ ಮೇಲ್ವಿಚಾರಕ ಸುರೇಶ ಮೋಹಿತೆ, ಮೇಲ್ವಿಚಾರಕ ನವೀನ ಪಾಟೀಲ, ಮುಖಂಡರಾದ ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ ದೇವೇಂದ್ರ ಅಂಬಳನೂರ, ಪ್ರಕಾಶ ರಾಠೋಡ, ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ : ಕೃಷ್ಣ ರಾಠೋಡ್




