ಜೂನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೂ ಮುನ್ನವೇ ಭಾರತ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ ಮಾಡಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಥಾನ ತುಂಬುವವರು ಯಾರೆಂಬ ಚರ್ಚೆಗಳು ಶುರುವಾಗಿವೆ. ಐವರು ಆಟಗಾರರ ನಡುವೆ ಪೈಪೋಟಿ ಶುರುವಾಗಿದೆ.
ಟೆಸ್ಟ್ ತಂಡದ ಖಾಯಂ ಆಟಗಾರ ಕೆ.ಎಲ್.ರಾಹುಲ್ 4, 5 ಅಥವಾ 6ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬರುತ್ತಿದ್ದರು. ಇದೀಗ ಕೊಹ್ಲಿ ಮತ್ತು ಶರ್ಮಾ ಸ್ಥಾನ ಖಾಲಿ ಇರುವುದರಿಂದ ಓಪನರ್ ಅಥವಾ ನಾಲ್ಕನೇ ಸ್ಥಾನದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಶ್ರೇಯಸ್ ಅಯ್ಯರ್ ಆಯ್ಕೆಗೆ ಪ್ರಥಮ ಆದ್ಯತೆ?: ಈಗಾಗಲೇ ದೀರ್ಘ ಸ್ವರೂಪದಲ್ಲಿ ಆಡಿದ ಅನುಭವ ಹೊಂದಿರುವ ಶ್ರೇಯಸ್ ಅಯ್ಯರ್ ಹೆಸರೂ ಕೂಡ ರೇಸ್ನಲ್ಲಿದೆ. ಇದುವರೆಗೂ 14 ಟೆಸ್ಟ್ ಪಂದ್ಯಗಳನ್ನಾಡಿರುವ ಅಯ್ಯರ್ 24 ಇನ್ನಿಂಗ್ಸ್‌ನಲ್ಲಿ 36.86ರ ಸರಾಸರಿಯಲ್ಲಿ 811 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 5 ಅರ್ಧಶತಕ ಸೇರಿವೆ. ಹೀಗಾಗಿ ಅಯ್ಯರ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಕಮ್ ಬ್ಯಾಕ್ ಮಾಡುವರೇ ಕರುಣ್ : ಸೆಹ್ವಾಗ್ ಬಳಿಕ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಬ್ಯಾಟರ್ ಕರುಣ್ ನಾಯರ್ ಕೂಡ ಟೀಮ್ ಇಂಡಿಯಾದಲ್ಲಿ ಮರಳಿ ಸ್ಥಾನ ಪಡೆಯುವ ಅವಕಾಶವಿದೆ. ಇತ್ತೀಚೆಗೆ ಮುಕ್ತಾಯಗೊಂಡಿದ್ದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅವರು ಸತತ ಐದು ಅಜೇಯ ಶತಕ ಬಾರಿಸಿದ್ದರು. ಸದ್ಯ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿರುವ ನಾಯರ್ಗೆ ಆಯ್ಕೆ ಸಮಿತಿ ಕೈ ಹಿಡಿಯುತ್ತಾ ಎಂದು ಕಾದುನೋಡಬೇಕಿದೆ.
ಕರ್ನಾಟಕದ ಕುವರನಿಗೆ ಅವಕಾಶ ಸಿಕ್ಕೀತೇ? ಬಲಗೈ ಬ್ಯಾಟರ್ ಪಡಕ್ಕಲ್ ಈ ಹಿಂದೆ ಮೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಕ್ಲಾಸಿಕ್ ಬ್ಯಾಟರ್ ಆಗಿರುವ ಇವರು ಟೆಸ್ಟ್ಗೆ ಕಮ್ಬ್ಯಾಕ್ ಮಾಡಬಹುದು.
ಐಪಿಎಲ್ನಲ್ಲಿ ಓಪನರ್ ಆಗಿ ಮಿಂಚುತ್ತಿರುವ ಸಾಯಿ ಸುದರ್ಶನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ. ಈವರೆಗೂ ಆಡಿರುವ 29 ಪಂದ್ಯಗಳ 49 ಇನ್ನಿಂಗ್ಸ್ಗಳಲ್ಲಿ 55.06ರ ಸರಾಸರಿಯಲ್ಲಿ 1957 ರನ್ ಬಾರಿಸಿದ್ದಾರೆ. ಟೆಸ್ಟ್ ತಂಡಕ್ಕೆ ಇವರ ಹೆಸರೂ ಕೂಡ ಕೇಳಿ ಬರುತ್ತಿದೆ.