ಬೆಳಗಾವಿ : ಮರಾಠಿಯಲ್ಲಿ ಮಾತನಾಡುವಂತೆ ಕೆಎಸ್ಆರ್ಟಿಸಿ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೇಯ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಎಂಇಎಸ್ನ ಮುಖಂಡ ಶಂಭು ಶಳಕೆ ತನ್ನ ಕೊಳಕು ನಾಲಿಗೆಯನ್ನು ಹರಿಬಿಟ್ಟು ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾನೆ.
ಕಂಡಕ್ಟರ್ ಸುಳ್ಳು ಆರೋಪ ಮಾಡಿದ್ದಾನೆ. ಅವನ ಪರವಾಗಿ ಹೋರಾಟ ಮಾಡುತ್ತಿರುವ ಕನ್ನಡಪರ ಸಂಘಟನೆಗಳ ಹೋರಾಟಗಾರರು ನಾಲಾಯಕ್ಗಳು ಎಂದು ಆಕ್ಷೇಪಾರ್ಹ ಪದ ಬಳಸಿದ್ದು, ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋ ಹರಿಬಿಟ್ಟ ಶಳಕೆ, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೋರ್ವಳ ಜೊತೆ ಕಂಡಕ್ಟರ್ ಅನುಚಿತವಾಗಿ ವರ್ತಿಸಿದ್ದಾನೆ. ಕೆಟ್ಟ ಪದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದಾಗ, ಕಂಡಕ್ಟರ್ ಉದ್ಧಟತನ ತೋರಿಸದ ಪರಿಣಾಮ ಕಂಡಕ್ಟರ್ ಮೇಲೆ ಹಲ್ಲೆಯಾಗಿದೆ ಎಂದು ದೊಡ್ಡ ಸಮರ್ಥನೆಯನ್ನು ಶಳಕೆ ನೀಡಿದ್ದಾನೆ.
ತನ್ನ ಸಮರ್ಥನೆಯ ಮಾತುಗಳಲ್ಲಿ ಕನ್ನಡಪರ ಹೋರಾಟಗಾರರಿಗೆ ಅವಮಾನಕರ ಪದ ಬಳಸಿದ್ದು, ಇದೀಗ ಕನ್ನಡ ಮತ್ತು ಮರಾಠಿಗರ ನಡುವೆ ಮತ್ತೊಂದು ಸಂಘರ್ಷಕ್ಕೆ ಶಳಕೆ ಕಿಡಿಹೊತ್ತಿಸಿದಂತಾಗಿದೆ.




