ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಇದೀಗ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಬೆದರಿಕೆಯೊಡ್ಡಿರುವ ಆರೋಪದಡಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಮನೆ ಕೆಲಸದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಅದೇ ದೂರು ಆಧರಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ.
ಇದರ ನಡುವೆಯೂ ಪ್ರಜ್ವಲ್ ವಿರುದ್ಧ ಮತ್ತೊಬ್ಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ತನಿಖೆಯನ್ನೂ ಎಸ್‌ಐಟಿ ಕೈಗೆತ್ತಿಕೊಂಡಿದೆ.ದೂರಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ‘ಮತ್ತೊಬ್ಬ ಮಹಿಳೆ ದೂರು ನೀಡಿದ್ದಾರೆ. ಇದು ಎರಡನೇ ದೂರು. ಮಹಿಳೆಯರು ಧೈರ್ಯವಾಗಿ ಬಂದು ದೂರು ನೀಡಬಹುದು. ತಮಗೆ ಸರ್ಕಾರ ಎಲ್ಲ ರೀತಿಯ ಭದ್ರತೆ ನೀಡಲಿದೆ’ ಎಂದು ತಿಳಿಸಿದರು.