ಬಾಗಲಕೋಟೆ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಲಾಂಗು ಮತ್ತು ಮಚ್ಚಿನ ಸದ್ದು ಕೇಳಿಸಿದೆ. ನಿನ್ನೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಗುಳೆದಗುಡ್ಡ ಪಟ್ಟಣದಲ್ಲಿ ಘಟನೆ ನಡೆದಿದೆ.
ಲಾಂಗು, ಮಚ್ಚು, ಕಟ್ಟಿಗೆ, ದೊಣ್ಣೆ, ಕಲ್ಲು ಸಮೇತ ಗುಂಪು ಬಂದಿದ್ದವು. ಪೊಲೀಸರ ಮುನ್ನೆಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ. 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವು ಕೊಡಬಾಗಿ, ಇಮಾಮ್ ಕಲಾಶಿ, ವಿಶ್ವನಾಥ ಅಂಬಿಗೇರ್, ಮೊಹಮ್ಮದ್ ಅಲಿ ಮಂಟೂರ್ ಬಂಧಿತರು. ಸಮೀರ್ ಮುಲ್ಲಾ, ವಿಲಾಸ್ ರಾಠೋಡ, ಇಮ್ರಾನ್ ಗಾಡಿ, ಸಮೀರ್ ಚಿಮ್ಮಲಗಿ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಕ್ಷೇತ್ರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡಲಾಗಿದೆ. ಸಿದ್ದರಾಮಯ್ಯ ಆಪ್ತ ಹಾಗೂ ಬಾದಾಮಿ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಎರಡು ಬಣಗಳ ಬಡಿದಾಟದಲ್ಲಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿತ್ತು. ಸ್ಪಷ್ಟ ಬಹುಮತ ಇದ್ದರೂ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ಲಾಂಗ್, ಮಚ್ಚು ಹಿಡಿದು ಬಂದವರು ಯಾವ ಗುಂಪುನವರು ಎಂಬುದನ್ನು ಪೊಲೀಸರು ಮಾಹಿತಿ ಬಿಟ್ಟು ಕೊಟ್ಟಿಲ್ಲ. 23 ಸದ್ಯಸರ ಬಲದ ಗುಳೇದಗುಡ್ಡ ಪುರಸಭೆಯಲ್ಲಿ 15 ಜನ ಕಾಂಗ್ರೆಸ್, 5 ಜೆಡಿಎಸ್, 2 ಬಿಜೆಪಿ, ಓರ್ವ ಪಕ್ಷೇತರ ಸದಸ್ಯ ಬಲ ಹೊಂದಿದೆ.