ಬೆಳಗಾವಿ: ದೂರುದಾರನಿಂದ ಒಂದು ಒಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಸಿಪಿಐ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಎಸ್, ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಭ್ರಷ್ಟಾಚಾರ ಪ್ರಕರಣ ಬಯಲಾಗಿದ್ದು, ಅಥಣಿ ಪೊಲೀಸ್ ಠಾಣೆಯ ಸಿಪಿಐ ಸಂತೋಷ್ ಹಳ್ಳೂರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮೀರಸಾಬ್ ಮುಜಾವರ್ ಎಂಬುವವರು ನೀಡಿದ ದೂರು ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಅವರು ಅನುಪಕುಮಾರ್ ನಾಯರ್ ಎಂಬುವವರಿಗೆ ಎರಡು ಸೈಟ್ ಕೊಡಿಸುವ ನೆಪದಲ್ಲಿ 20 ಲಕ್ಷ ರೂಪಾಯಿ ನೀಡಿದ್ದರು. ಆದರೆ ಸೈಟ್ ನೀಡದಿದ್ದ ಕಾರಣ ಹಣ ವಾಪಸ್ ಕೊಡಿಸುವಂತೆ ಪೊಲೀಸ್ ಠಾಣೆಗೆ ತೆರಳಿದಾಗ, ಸಿಪಿಐ ಹಳ್ಳೂರ ಅವರು ಒಂದು ಲಕ್ಷ ರೂಪಾಯಿ ಲಂಚ ಬೇಡಿಕೆಯಿಟ್ಟಿದ್ದಾರೆಂದು ಆರೋಪಿಸಲಾಗಿದೆ.
ಈ ಕುರಿತು ಮೀರಸಾಬ್ ಮತ್ತು ಸಿಪಿಐ ನಡುವಿನ ಹಣದ ವ್ಯವಹಾರ ಕುರಿತು ನಡೆದ ಮಾತುಕತೆಯ ಆಡಿಯೋ ದಾಖಲೆ ಆಧಾರವಾಗಿ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಅಥಣಿ ಠಾಣೆ ಹಾಗೂ ಸಿಪಿಐ ಹಳ್ಳೂರ ಅವರ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದು, ದಾಳಿ ಮಾಹಿತಿಯು ಸಿಕ್ಕ ತಕ್ಷಣ ಸಿಪಿಐ ಪರಾರಿಯಾಗಿದ್ದಾರೆ. ಈ ಘಟನೆಯು ಅಥಣಿ ಪೊಲೀಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.




