ತುರುವೇಕೆರೆ: ಪಟ್ಣಣದ ವೈ.ಟಿ.ರಸ್ತೆಯಲ್ಲಿರುವ ಜಿಮೊಫೈ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಶೋರೂಂನಲ್ಲಿ ಬೆಂಕಿ ದುರಂತ ಸಂಭವಿಸಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಶೋರೂಂ ಅರಳೀಕೆರೆ ಗ್ರಾಮದ ಮೋಹನ್ ಅವರಿಗೆ ಸೇರಿದ್ದು ಎನ್ನಲಾಗಿದೆ. ಬೆಂಕಿ ದುರಂತಕ್ಕೆ ಶೋರೂಂನಲ್ಲಿದ್ದ ಎರಡು ಜಿಮೊಫೈ ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ, ಅಂಗಡಿಯಲ್ಲಿದ್ದ ಸಾಕಷ್ಟು ದ್ವಿಚಕ್ರ ವಾಹನಗಳಿಗೆ ಬೆಂಕಿಯ ಕಾವು ತಗುಲಿದೆ. ಅಂಗಡಿಯ ಮುಂಭಾಗಿಲ ಬೃಹತ್ ಗಾಜಿನ ಡೋರ್ ಸಿಡಿದಿದೆ. ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಭಸ್ನವಾಗಿದೆ. ಒಟ್ಟಾರೆ ಅಗ್ನಿ ಅನಾಹುತಕ್ಕೆ ಜಿಮೊಫೈ ಶೋರೂಂನಲ್ಲಿ ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದೆ.
ಇಂದು ಸಂಜೆ 6.30ರ ಸುಮಾರಿನಲ್ಲಿ ಜಿಮೊಫೈ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,
ಅಕ್ಕಪಕ್ಕದ ಅಂಗಡಿಗಳವರು ಗಾಬರಿಯಿಂದ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಶೋರೂಂನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಹಳೆಯ ಬ್ಯಾಟರಿ ಚಾರ್ಜಿಗೆ ಹೋಗಿದ್ದರೆನ್ನಲಾಗಿದೆ. ಚಾರ್ಜಿಗೆ ಹಾಕಿದ್ದ ಬ್ಯಾಟರಿ ಸಿಡಿದು ಈ ಅಗ್ನಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಬ್ಯಾಟರಿ ಸಿಡಿದ ಪರಿಣಾಮ, ಚಾರ್ಜಿಂಗ್ ಪಾಯಿಂಟ್ ಪಕ್ಕದಲ್ಲೇ ಇದ್ದ ಗಾಜಿನ ಬಾಗಿಲು ಸಿಡಿದಿದೆ, ಅಕ್ಕಪಕ್ಕದಲ್ಲಿದ್ದ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಯವರ ಶೀಘ್ರ ಕಾರ್ಯಾಚರಣೆ ನಡೆಸಿ ಜನನಿಬಿಡ ಪ್ರದೇಶದಲ್ಲಿ ಮುಂದಾಗಬಹುದಾದ ಬಹುದೊಡ್ಡ ಅಗ್ನಿ ದುರಂತವನ್ನು ತಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ನವೀನ್ ಕುಮಾರ್, ಶಿವಕುಮಾರ್, ರಾಹುಲ್, ತೌಸಿಫ್ ಭಗವಾನ್, ಸುನಿಲ್ ಹಿರೇಮಠ ಪಾಲ್ಗೊಂಡಿದ್ದು, ನಾಗರೀಕರು ಬೆಂಕಿ ನಂದಿಸಲು ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಿದರು.
ವರದಿ: ಗಿರೀಶ್ ಕೆ ಭಟ್