ಮಾರ್ಚ್ 30ರಂದು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರ ವಹಿಸಿರುವ ಬಹುನಿರೀಕ್ಷಿತ ಚಿತ್ರ ‘ಸಿಕಂದರ್’ ತೆರೆಗಪ್ಪಳಿಸಿದೆ. ಇದೇ ಮೊದಲ ಬಾರಿಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಂಡಿರುವ ಚಿತ್ರದ ಉತ್ತಮ ಪ್ರದರ್ಶನ ಮುಂದುವರಿದಿದ್ದು, ಸೆಲೆಬ್ರಿಟಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಅದರಂತೆ, ಇತ್ತೀಚಿನ ಸಂದರ್ಶನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ‘ನಾನು ಕರ್ನಾಟಕದವಳು’ ಎಂದು ರಶ್ಮಿಕಾ ಹೇಳಿರುವ ಹಿನ್ನೆಲೆ, ವಿಡಿಯೋ ಶರವೇಗದಲ್ಲಿ ವೈರಲ್ ಆಗಿ ವಿಭಿನ್ನ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ನೀವೊಂದು ಪ್ರದೇಶದಲ್ಲಿದ್ದಾಗ, ಸುತ್ತಮುತ್ತ ಆ ಪ್ರದೇಶದ ಭಾಷೆ ಮಾತನಾಡುವ ಜನರಿದ್ದಾಗ, ಆ ಭಾಷೆಯನ್ನು ಕಲಿಯೋದು ಬಹಳ ಸುಲಭ. ನಾನು ಕರ್ನಾಟಕದವಳು. ನಾನು ಕರ್ನಾಟಕದಲ್ಲಿ ಬೆಳೆದಿದ್ದು. ನಾನು ಕನ್ನಡ ಮಾತ್ರ ಮಾತನಾಡುತ್ತಿದ್ದದ್ದು. ಇಂಗ್ಲಿಷ್ ಗೊತ್ತಿತ್ತು. ಇದೀಗ ಬಹುಭಾಷೆಗಳನ್ನು ಕಲಿತಿದ್ದೇನೆ –ನಟಿ ರಶ್ಮಿಕಾ ಮಂದಣ್ಣ.
ಮಾರ್ಚ್ ಆರಂಭದಲ್ಲಿ ರಶ್ಮಿಕಾ ಮಂದಣ್ಣ ಈವೆಂಟ್ ಒಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ನಟಿ ತಮ್ಮನ್ನು ಹೈದರಾಬಾದ್ ಮೂಲದವಳು ಎಂದು ಹೇಳಿಕೊಂಡರು. ಇದು ಕೆಲ ಕನ್ನಡಿಗರನ್ನು ಕೆರಳಿಸಿತು. ಪರ-ವಿರೋಧ ಚರ್ಚೆ ಶುರುವಾಯಿತು. ಕನ್ನಡ ಚಿತ್ರರರಂಗದಿಂದ ವೃತ್ತಿಜೀವನ ಆರಂಭಿಸಿದರಾದರೂ, ಕರ್ನಾಟಕ ಮೂಲದವರಾದರು ಜನಪ್ರಿಯ ನಟಿ ಕೊಟ್ಟ ಹೇಳಿಕೆ ಕನ್ನಡ ಪರ ಗುಂಪುಗಳು ಮತ್ತು ಕೆಲ ರಾಜಕೀಯ ಗಣ್ಯರ ಅಸಮಾಧಾನಕ್ಕೆ ಕಾರಣವಾಯಿತು. ಆಕ್ರೋಶವನ್ನು ಕೆಲ ಗಣ್ಯರು ತಮ್ಮ ಹೇಳಿಕೆಗಳ ಮೂಲಕ ಹೊರಹಾಕಿದರು.