ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಗಿಂತಲೂ ಅಧಿಕವಾಗಿದ್ದು, 24 ಗಂಟೆಯಲ್ಲಿ ಬಿಸಿಲ ತೀವ್ರತೆಯಿಂದ ಬಳಲಿದ 5 ಜನ ಸಾವನ್ನಪ್ಪಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಕಳೆದ ವಾರದಿಂದ 42ರಿಂದ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.ಬಿರುಬಿಸಿಲಿನ ಅಡ್ಡ ಪರಿಣಾಮದ ಕಾರಣ ರಾಯಚೂರು, ಸಿಂಧನೂರು, ಮಸ್ಕಿ ತಾಲೂಕುಗಳಲ್ಲಿ ಒಟ್ಟು ಆರು ಜನ ಮೃತಪಟ್ಟಿದ್ದಾರೆ.
ಸಿಂಧನೂರು ತಾಲೂಕಿನ ಹುಡಾ ಗ್ರಾಮದ ಪ್ರದೀಪ ಪೂಜಾರಿ(18), ಗಂಗಮ್ಮ(67), ದುರ್ಗಮ್ಮ ಉಪ್ಪಾರ(69) ವೀರೇಶ ಮಡಿವಾಳ(67) ಶನಿವಾರ ಸಾವನ್ನಪ್ಪಿದ್ದಾರೆ.
ಇವರಲ್ಲಿ ಇಬ್ಬರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರೆ ಒಬ್ಬರು ಕ್ಯಾನ್ಸರ್ ಪೀಡಿತರಾಗಿದ್ದರು. ಮತ್ತೊಬ್ಬರು ವಿಕಲಚೇತನರಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಮಸ್ಕಿ ತಾಲೂಕಿನ ಹನುಮಕಲ್ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಶುಕ್ರವಾರ ಮಧ್ಯಾಹ್ನ ಮಸ್ಕಿ ಪಟ್ಟಣದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೇ ದಿಢೀರ್ ಕುಸಿದು ಬಿದ್ದಿದ್ದಾರೆ.
ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆಗೂ ಮೊದಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್ ಆಗಿದ್ದ ಮಲ್ಲಿಕಾರ್ಜುನ ಸ್ವಾಮಿ ರಜೆ ಪಡೆದು ಊರಿಗೆ ಬಂದಿದ್ದು, ಈ ವೇಳೆ ಬಿಸಿಲು ಹೊಡೆತಕ್ಕೆ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಜಾಲಿಬೆಂಚಿಯಲ್ಲಿ ಶನಿವಾರ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಹನುಮಂತ 45 ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.