ಒಡಿಶಾ: ಗೋಮಾಂಸದ ಅಡುಗೆ ಮಾಡಿದ್ದ ಆರೋಪದ ಮೇಲೆ 5 ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಲಾದ ಘಟನೆ ನಡೆದಿದೆ.
ಒಡಿಶಾದ ಬೆರ್ಹಾಂಪುರದಲ್ಲಿರುವ ಸರ್ಕಾರಿ ಸ್ವಾಮ್ಯದ ಪರಾಲ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಉದ್ವಿಗ್ನತೆ ಉಂಟಾಗಿದ್ದು, ಕಾಲೇಜು ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಘಟನೆಗೆ ಸಂಬಂಧಿಸಿ ಉಚ್ಛಾಟಿತ ವಿದ್ಯಾರ್ಥಿಯೊಬ್ಬನಿಗೆ 2,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಉಚ್ಛಾಟಿತ ವಿದ್ಯಾರ್ಥಿಗಳು ಬುಧವಾರ ರಾತ್ರಿ ಹಾಸ್ಟೆಲ್ ಆವರಣದಲ್ಲಿ ದನದ ಮಾಂಸದ ಅಡುಗೆಯಲ್ಲಿ ತೊಡಗಿದ್ದರು. ಇದಾದ ನಂತರ ಮತ್ತೊಂದು ಗುಂಪಿನ ವಿದ್ಯಾರ್ಥಿಗಳು ಘಟನೆಯ ಬಗ್ಗೆ ಡೀನ್‌ಗೆ ದೂರು ನೀಡಿದ್ದರು. ಇದು ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಗುಂಪು ಕೂಡ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರನ್ನು ಭೇಟಿ ಮಾಡಿ, ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು ಎನ್ನಲಾಗಿದೆ.