ತುರುವೇಕೆರೆ : ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯ ಖಂಡಿಸಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ, ಕೊಲೆ ಮಾಡಲಾಗುತ್ತಿದೆ. ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಪತ್ರಕರ್ತರೋರ್ವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಳೆದ 18 ದಿನಗಳಲ್ಲಿ 6 ಮಂದಿ ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ಇದು ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಅರ್ಥೈಸುತ್ತದೆ. ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿದ್ದರೂ ಸರ್ಕಾರ ರಕ್ಷಣೆ ನೀಡುತ್ತಿಲ್ಲ ಎಂದರೆ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯದ ಹಿಂದೆ ಸರ್ಕಾರದ ನೇರಪಾತ್ರವಿದೆ ಎಂದು ಆರೋಪಿಸಿದರು.

ಇಡೀ ವಿಶ್ವದಲ್ಲಿ ಭಾರತ ದೇಶ ಮಾತ್ರ ಹಿಂದೂಗಳಿಗಾಗಿ ಇರುವ ಏಕೈಕ ರಾಷ್ಟ್ರವಾಗಿದೆ. ಈ ದೇಶದ ಜನತೆ ಬೇರೆ ರಾಷ್ಟçದವರು ನಮ್ಮಲ್ಲಿಗೆ ಬಂದಾಗ ಶಾಂತಿ, ಸೌಹಾರ್ದತೆ, ಬ್ರಾತೃತ್ವ ಮನೋಭಾವದಿಂದ ಕಾಣುತ್ತಾರೆ. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧವೇ ನಡೆಯುತ್ತಿದೆ. ಭಾರತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀ, ಗೃಹ ಸಚಿವ ಅಮಿತ್ ಶಾ ಹಾಗೂ ವಿದೇಶಾಂಗ ಸಚಿವರು ಈ ಬಗ್ಗೆ ಗಮನಹರಿಸಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯ, ಕೊಲೆ, ದೌರ್ಜನ್ಯವನ್ನು ಖಂಡಿಸಿ ಆ ದೇಶಕ್ಕೆ ತಕ್ಕ ಉತ್ತರ ರವಾನಿಸಬೇಕು ಹಾಗೂ ಹಿಂದೂಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೈಯಲ್ಲಿ ಪಂಜನ್ನು ಹಿಡಿದ ಯುವಕರು ಗಣಪತಿ ಪೆಂಡಾಲ್ ಇಂದ ಬಾಣಸಂದ್ರ ವೃತ್ತದವರೆಗೂ ಆಗಮಿಸಿ ಹಿಂದೂಗಳ ಹತ್ಯೆ ಖಂಡಿಸಿ ಧಿಕ್ಕಾರ ಕೂಗಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯ ಖಂಡಿಸಿ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾಪ್ರಭಾಕರ್, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರಾದ ನವೀನ್ ಬಾಬು, ಅಶ್ವಿನ್ ಪತ್ರೆಮನೆ, ಗಣೇಶ್, ಜಯಂತ್, ಹೇಮಂತ್, ಯೋಗೀಶ್, ರಾಕೇಂದು, ಕಾರ್ತೀಕ್, ರವಿತೇಜ, ಪವನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್




