ಬೆಂಗಳೂರು : ಜಾನಪದವು ನಮ್ಮ ಸಂಸ್ಕೃತಿಯ ಪ್ರತೀಕಗಳನ್ನು ತಿಳಿಸುತ್ತದೆ. ಹಾಗೆಯೇ ನಮ್ಮ ಬದುಕಿಗೆ ನೀತಿ ಪಾಠಗಳನ್ನು ಕಲಿಸುತ್ತದೆ ಎಂದು ಕನ್ನಡಪರ ಚಿಂತಕ ಡಾ. ಚಿಕ್ಕಹೆಜ್ಜಾಜಿ ಮಹದೇವ್ ತಿಳಿಸಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಅಸೆಂಟ್ ಪಿಯು ಕಾಲೇಜಿನಲ್ಲಿ ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಜಾನಪದ ಪರಿಷತ್ ವತಿಯಿಂದ ಆಯೋಜಿಸಲಾದ ‘ದಶಮಾನೋತ್ಸವ ಸಂಭ್ರಮ’ ಉದ್ಘಾಟಿಸಿ ಮಾತನಾಡಿದರು.

ಶಾಸಕ ಎಸ್. ಮುನಿರಾಜು ಮಾತನಾಡಿ,’ ನಮ್ಮ ಬಾಲ್ಯದ ಗ್ರಾಮೀಣ ಬದುಕಿನಲ್ಲಿ ಜಾನಪದ ಹಾಡು, ನೃತ್ಯ, ಕ್ರೀಡೆ ಮುಂತಾದ ಆಚರಣೆಗಳನ್ನು ಆಚರಿಸಿ ಸಂತೋಷ ಪಡುತ್ತಿದ್ದೆವು ಅಂತಹ ಸಮೃದ್ಧ ಜಾನಪದ ಸಂಸ್ಕೃತಿಯನ್ನು ನಾವಿಂದು ಉಳಿಸಬೇಕಿದೆ’ ಎಂದರು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ಮಾತನಾಡಿ,’ ಜಾನಪದ ಎಂಬುದು ವಿಶಾಲವಾದ ಆಲದ ಮರ ಅದರ ಸಮೃದ್ಧ ನೆರಳ ಆಶ್ರಯದಲ್ಲಿ ಬದುಕುವ ನೆಮ್ಮದಿ ನಮ್ಮದಾಗಬೇಕು. ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.
ದಾಸರಹಳ್ಳಿ ಘಟಕದ ಅಧ್ಯಕ್ಷ ವೈ.ಬಿ.ಎಚ್ ಜಯದೇವ್ ಸರ್ವರಿಗೂ ಸ್ವಾಗತಿಸಿದರು.
10 ಸಾಧಕರಿಗೆ ದಶಮಾನೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ, ಹಾಡು ಮನರಂಜನೆ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ರಾಜಕಾರಣಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ನಗರ ಸಭಾ ಅಧ್ಯಕ್ಷ ಅಂದಾನಪ್ಪ, ಸಮಾಜ ಸೇವಕ ಹಾಗೂ ಚಿಂತಕ ಡಾ.ಸಂಗನ ಬಸಪ್ಪ ಬಿರಾದಾರ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಡಾ.ಮಂಜುನಾಥ್ (ಎಬಿಬಿ ಮಂಜಣ್ಣ), ಜೆಡಿಎಸ್ ಮುಖಂಡ ಚಿಕ್ಕಸಂದ್ರ ವಾರ್ಡಿನ ಅಧ್ಯಕ್ಷ ಭರತ್ ಗುಂಡಪ್ಪ, ಎಂ.ಬಿ. ದಯಾನಂದ್, ಸದಾಶಿವ, ಅಸೆಂಟ್ ಕಾಲೇಜಿನ ಅಧ್ಯಕ್ಷ ವೆಂಕಟೇಶ್, ಲತಾ ಕುಂದರಗಿ ಸೇರಿದಂತೆ ಸಾಹಿತ್ಯಗಳು ಉಪನ್ಯಾಸಕರು ವಿದ್ಯಾರ್ಥಿಗಳು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




