ತಳೇವಾಡಿ, (ಖಾನಾಪುರ – ಬೆಳಗಾವಿ): ಭೀಮಗಢ ಅರಣ್ಯ ಪ್ರದೇಶದೊಳಗಿ ಇರುವ ಗ್ರಾಮಗಳ ನಿವಾಸಿಗಳಿಗೆ ಸೂಕ್ತ ಪರಿಹಾರ ನೀಡಿ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದ್ದಾರೆ.
ಸೋಮವಾರ ರಾತ್ರಿ ಅಧಿವೇಶನದ ಬಳಿಕ ತಾಳೇವಾಡಿಗೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಸಚಿವರು, ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಸಿದ್ಧವಿದ್ದು, ಅರಣ್ಯವಾಸಿಗಳು ಸ್ವಯಂ ಪ್ರೇರಿತವಾಗಿ ಸ್ಥಳಾಂತರಕ್ಕೆ ಸಮ್ಮತಿಸಬೇಕು ಎಂದು ಮನವೊಲಿಸಿದರು.
ಪ್ರಸ್ತುತ ಭೀಮಗಢ ದಟ್ಟಾರಣ್ಯದೊಳಗೆ ಒಟ್ಟು 13 ಜನವಸತಿಗಳಲ್ಲಿ 754 ಕುಟುಂಬಗಳಿದ್ದು, 3059 ಜನ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಈಶ್ವರ ಖಂಡ್ರೆ, ಪೂರ್ಣ ಗ್ರಾಮದ ಜನರು ಸ್ಥಳಾಂತರಕ್ಕೆ ಸಮ್ಮತಿಸಿದರೆ ಅಂತಹ ಗ್ರಾಮಗಳ ಜನರಿಗೆ ಪುನರ್ವಸತಿ ಪರಿಹಾರ ನೀಡಿ ಸ್ಥಳಾಂತರಕ್ಕೆ ಕ್ರಮ ವಹಿಸುವಂತೆ ಸೂಚಿಸಿದರು.
ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಈಶ್ವರ ಖಂಡ್ರೆ ಸರ್ಕಾರ ಅರಣ್ಯವಾಸಿಗಳಿಗೆ ಸ್ಥಳಾಂತರಕ್ಕಾಗಿ ನೀಡುವ ಪುನರ್ವಸತಿ ಪರಿಹಾರದ ಹಣ ಅನ್ಯರ ಪಾಲಾಗದಂತೆ ಎಚ್ಚರವಹಿಸುವಂತೆ ಮತ್ತು ಅರಣ್ಯದ ಹೊರಗೆ ಕಂದಾಯ ಭೂಮಿ ಖರೀದಿಸಿ ಬದುಕು ಕಟ್ಟಿಕೊಳ್ಳುವಂತೆ, ಬ್ಯಾಂಕ್ ಖಾತ್ರಿಯಲ್ಲಿ ನಿಶ್ಚಿತ ಠೇವಣಿ ಇಡುವಂತೆ ಸಲಹೆ ನೀಡಿದರು.
ಭೀಮಗಢಕ್ಕೆ ಹೋಗುವ ಮಾರ್ಗದಲ್ಲಿ ಕಾಡಿನೊಳಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಸಮಸ್ಯೆ ವಿಚಾರಿಸಿದ ಸಚಿವರು ಕಾಡು ಪ್ರಾಣಿಗಳಿಂದ ಆಗುತ್ತಿರುವ ತೊಂದರೆ ಬಗ್ಗೆ ಮಾಹಿತಿ ಪಡೆದರು. ಪರಿಹಾರ ಪಡೆದು ಕಾಡಿನಿಂದ ಸ್ಥಳಾಂತರಗೊಳ್ಳುವಂತೆ ಅವರ ಮನವೊಲಿಸಿದರು.
ಕೊಂಗಲದಲ್ಲಿ 63 ಕುಟುಂಬಗಳು, ಪಸ್ತೋಲಿಯಲ್ಲಿ 36, ಗವಾಳಿಯಲ್ಲಿ 90, ಅಬನಾಳಿಯಲ್ಲಿ 81, ಜಾಮಗಾವ್ ನಲ್ಲಿ 82, ಹೆಮ್ಮಡಗದಲ್ಲಿ 128, ತಾಳೆವಾಡಿಯಲ್ಲಿ 13, ದೇಗಾವ್ ನಲ್ಲಿ 31, ಪಾಲಿಯಲ್ಲಿ 73, ಮೆಂಡಿಲ್ ನಲ್ಲಿ 40, ಕೃಷ್ಣಾಪುರದಲ್ಲಿ 12, ಹೋಲ್ಡಾದಲ್ಲಿ 7 ಹಾಗೂ ಅಮಗಾವ್ ನಲ್ಲಿ 98 ಕುಟುಂಬಗಳಿದ್ದು, ಈ ಪೈಕಿ 1530 ಪುರುಷರು, 1443 ಮಹಿಳೆಯರು ಸೇರಿ ಒಟ್ಟು 3059 ಜನರು ಇಲ್ಲಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಇದಕ್ಕೂ ಮುನ್ನ ಮಾರ್ಗಮಧ್ಯೆ ಅರಣ್ಯ ಸಚಿವರು ಮಹಾದಾಯಿ ನದಿಯ ವೀಕ್ಷಣೆ ಮಾಡಿ, ಹೆಮ್ಮಡಗಾದ ಭೀಮಗಢ ವನ್ಯಜೀವಿಧಾಮದ ಶಿಬಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ, ಖಾನಾಪುರ ಉಪ ವಿಭಾಗದ ಎಲ್ಲ ವಲಯ ಅರಣ್ಯಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು