Ad imageAd image

ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಸಂಚಲನ : ಮಾಜಿ ಸಿಎಂ ಪನ್ನೀರಸೆಲ್ವಂ ಡಿಎಂಕೆ ಪಕ್ಷ ಸೇರ್ಪಡೆ 

Bharath Vaibhav
ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಸಂಚಲನ : ಮಾಜಿ ಸಿಎಂ ಪನ್ನೀರಸೆಲ್ವಂ ಡಿಎಂಕೆ ಪಕ್ಷ ಸೇರ್ಪಡೆ 
WhatsApp Group Join Now
Telegram Group Join Now

ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ (AIADMK) ಉಚ್ಚಾಟಿತ ನಾಯಕ ಓ. ಪನ್ನೀರಸೆಲ್ವಂ (OPS) ಅವರು ಶುಕ್ರವಾರ ಆಡಳಿತಾರೂಢ ಡಿಎಂಕೆ (DMK) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಅತ್ಯಂತ ಆಪ್ತ ಹಾಗೂ ನಿಷ್ಠಾವಂತರಾಗಿದ್ದ ಪನ್ನೀರಸೆಲ್ವಂ ಅವರನ್ನು, ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹಿರಿಯ ಸಚಿವರ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು.

ಡಿಎಂಕೆ ಪಾಲಿಗೆ ಮಾಸ್ಟರ್ ಸ್ಟ್ರೋಕ್?

ಓಪಿಎಸ್ ಸೇರ್ಪಡೆಯು ದಕ್ಷಿಣ ತಮಿಳುನಾಡಿನಲ್ಲಿ, ವಿಶೇಷವಾಗಿ ‘ತೇವರ್’ ಸಮುದಾಯದ ಪ್ರಭಾವವಿರುವ ಭಾಗಗಳಲ್ಲಿ ಡಿಎಂಕೆ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕಾರ್ಯತಂತ್ರದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದು ಎಐಎಡಿಎಂಕೆ ಪಕ್ಷಕ್ಕೆ ಭಾರಿ ಹೊಡೆತ ನೀಡುವ ಸಾಧ್ಯತೆಯಿದ್ದು, ಅಲ್ಲಿನ ಸಾಂಪ್ರದಾಯಿಕ ಮತಬ್ಯಾಂಕ್ ಮತ್ತು ಅಸಮಾಧಾನಿತ ಕಾರ್ಯಕರ್ತರನ್ನು ತನ್ನತ್ತ ಸೆಳೆಯಲು ಡಿಎಂಕೆಗೆ ಸಹಕಾರಿಯಾಗಲಿದೆ.

ಹಿಂದಿನ ರಾಜಕೀಯ ಹಿನ್ನೆಲೆ ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಓಪಿಎಸ್, 2016ರಲ್ಲಿ ಜಯಲಲಿತಾ ಅವರ ನಿಧನದ ನಂತರ ಪಕ್ಷದಲ್ಲಿ ನಾಯಕತ್ವಕ್ಕಾಗಿ ತೀವ್ರ ಸಂಘರ್ಷ ನಡೆಸಿದ್ದರು.

ಎಡಪ್ಪಾಡಿ ಪಳನಿಸ್ವಾಮಿ (EPS) ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷವು ಇಬ್ಭಾಗವಾಗಿತ್ತು. ಅಂತಿಮವಾಗಿ ಓಪಿಎಸ್ ಪಕ್ಷದ ಮೇಲಿನ ಹಿಡಿತವನ್ನು ಕಳೆದುಕೊಂಡು ಉಚ್ಚಾಟನೆಗೊಂಡಿದ್ದರು.

ಮರುಸೇರ್ಪಡೆಗೆ ನಿರಾಕರಿಸಿದ್ದ ಇಪಿಎಸ್

ಕೆಲವು ದಿನಗಳ ಹಿಂದಷ್ಟೇ ಓಪಿಎಸ್ ಅವರು 2026ರ ಚುನಾವಣೆಯ ದೃಷ್ಟಿಯಿಂದ ಇಪಿಎಸ್ ಅವರನ್ನು ತಮ್ಮ ‘ಅಣ್ಣ’ ಎಂದು ಕರೆಯುವ ಮೂಲಕ ಮರುಸೇರ್ಪಡೆಗೆ ಇಚ್ಛೆ ವ್ಯಕ್ತಪಡಿಸಿದ್ದರು.

ಆದರೆ ಇಪಿಎಸ್ ಮಾತ್ರ “ಯಾವುದೇ ಕಾರಣಕ್ಕೂ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಖಡಕ್ ಆಗಿ ಹೇಳಿದ್ದರು.

ಡಿಎಂಕೆ ಪರ ಒಲವು ತೋರಿಸಿದ್ದ ಓಪಿಎಸ್

ಪಕ್ಷ ಸೇರುವ ಮೊದಲೇ ಓಪಿಎಸ್ ಅವರು ಡಿಎಂಕೆ ಪರವಾಗಿ ಮೃದು ಧೋರಣೆ ತಳೆದಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಅವರು ಅನೇಕ ಬಾರಿ ಸಿಎಂ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು.

“ಸಿಎಂ ಸ್ಟಾಲಿನ್ ಅವರ ಐದು ವರ್ಷದ ಉತ್ತಮ ಆಡಳಿತ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. 2026ರಲ್ಲಿ ಮತ್ತೆ ಡಿಎಂಕೆ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ” ಎಂದು ಅವರು ಹೇಳಿಕೆ ನೀಡಿದ್ದರು.ಕಳೆದ ವರ್ಷ ಜುಲೈನಲ್ಲಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟದಿಂದಲೂ ಹೊರಬಂದಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!