ಟೀಮ್ ಇಂಡಿಯಾದ ಮುಖ್ಯ ಕೋಚ್ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ‘ನಾನು ನಿನ್ನನ್ನು ಕೊಲ್ಲುತ್ತೇನೆ’ ಎಂಬ ಸಂದೇಶವಿರುವ ಅನಾಮಧೇಯ ಇ-ಮೇಲ್‌ಗಳು ಬಂದಿವೆ ಎಂದು ಗಂಭೀರ್ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಇ-ಮೇಲ್ ಯಾರು ಕಳುಹಿಸಿದ್ದಾರೆ ಎಂಬುದರ ಕುರಿತು ಸೈಬರ್ ಸೆಲ್ ತನಿಖೆ ಪ್ರಾರಂಭಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದರಿಂದ ಈ ಬೆದರಿಕೆ ಸಂದೇಶ ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ, ದೆಹಲಿ ಪೊಲೀಸರ ಮೊರೆ ಹೊಗಿರುವ ಗಂಭೀರ್ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬೆದರಿಕೆಗಳು ಕಾಶ್ಮೀರದಿಂದಲೇ ಬಂದಿವೆ ಎಂದು ವರದಿಯಾಗಿದೆ.
ಪಹಲ್ಗಾಮ್ ಘಟನೆ ಬಳಿಕ ಪೋಸ್ಟ್ ಹಂಚಿಕೊಂಡಿದ್ದ ಗಂಭೀರ್, “ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ್ದರು. ಇದಕ್ಕೆ ಕಾರಣರಾದವರು ಖಂಡಿತವಾಗಿಯೂ ಭಾರಿ ಬೆಲೆ ತೆರಬೇಕಾಗುತ್ತದೆ. ಈ ಘಟನೆಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತದೆ” ಎಂದು ಪೋಸ್ಟ್ ಮಾಡಿದ್ದರು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದು, ಈಗಾಗಲೇ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.




