ರಾಯಚೂರು : ಮಾಜಿ ಸಚಿವ, ದೇವದುರ್ಗದ ಮಾಜಿ ಶಾಸಕ ಕೆ.ಶಿವನಗೌಡ ನಾಯಕ್ ಈಗ ನವಿಲುಗರಿ ಹಾರ ವಿವಾದದಲ್ಲಿ ಸಿಲುಕಿದ್ದಾರೆ.
ಜುಲೈ 14 ರಂದು ಕೆ.ಶಿವನಗೌಡ ನಾಯಕ್ ಹುಟ್ಟುಹಬ್ಬವಿತ್ತು. ಸಂಭ್ರಮದ ವೇಳೆ ನವಿಲುಗರಿಯ ಹಾರ ಧರಿಸಿದ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಶಿವನಗೌಡ ನಾಯಕ್ ವಿರುದ್ಧ ದೂರು ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕಲ್ಲಹಳ್ಳಿ ಇಮೇಲ್ ಮೂಲಕ ದೂರು ನೀಡಿದ್ದು, ‘ರಾಷ್ಟ್ರಪಕ್ಷಿ ನವಿಲಿನ ಗರಿಯಿಂದ ತಯಾರಿಸಿದ ಹಾರವನ್ನ ಧರಿಸಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಿ ಇತರರು ಕೂಡ ಪ್ರೇರಿತರಾಗುವ ಅಪಾಯವಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನ ಮಾಜಿ ಸಚಿವ ಶಿವನಗೌಡ ನಾಯಕ್ ಉಲ್ಲಂಘಿಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನವಿಲು ಗರಿಯ ಮೂಲ ಪತ್ತೆ ಹಚ್ಚಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.




