ಮೊಳಕಾಲ್ಮುರು : ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆಗೆ ಡಿಜೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಸಚಿವ ಶ್ರೀರಾಮುಲು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಮೊಳಕಾಲ್ಮುರು ಪಟ್ಟಣದಲ್ಲಿಂದು ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ನಡೆಯುತ್ತಿದೆ. ಈ ಬೃಹತ್ ಶೋಭಯಾತ್ರೆಗೆ ಪೊಲೀಸ್ ಇಲಾಖೆಯು ಡಿಜೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಮತ್ತು ಅವರ ಬೆಂಬಲಿಗರು ಸೇರಿದಂತೆ ಸಾವಿರಾರು ಜನರು ಡಿಜೆಗೆ ಆಗ್ರಹಿಸಿ ರಸ್ತೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಬಂದ ಡಿವೈ ಎಸ್ಪಿ ರಾಜಣ್ಣ ಮಾಜಿ ಸಚಿವರಿಗೆ ಮನವೊಲಿಕೆ ಮಾಡಲು ಮುಂದಾದರು.ಮಾಜಿ ಸಚಿವ ಶ್ರೀರಾಮುಲು ಮಾತನಾಡಿ,ವರ್ಷಕ್ಕೊಮ್ಮೆ ಈ ಹಬ್ಬ ಆಚರಣೆಯನ್ನು ಮಾಡುತ್ತಿದ್ದೇವೆ,ಶೋಭಾ ಯಾತ್ರೆಗೆ ಡಿಜೆಗೆ ಅನುಮತಿ ನೀಡದೆ ಇರುವುದು ಹಿಂದುಗಳ ಭಾವನೆಗೆ ಧಕ್ಕೆ ತರುವಂತದ್ದು, ಕಾನೂನಿನ ಚೌಕಟ್ಟನ್ನು ಮೀರಿ ಇಲ್ಲಿ ಯಾರು ಕೂಡ ವರ್ತನೆ ಮಾಡುತ್ತಿಲ್ಲ.ಕಳೆದ 58 ವರ್ಷಗಳಿಂದ ಇಲ್ಲಿ ನಡೆಯುವಂತಹ ಶೋಭಾ ಯಾತ್ರೆಯಲ್ಲಿ ಯಾವುದೇ ಒಂದು ಸಣ್ಣ ಕೋಮು ಗಲಭೆಗಳು ನಡೆದ ಪ್ರಸಂಗಗಳು ಇಲ್ಲಾ.
ಬಳ್ಳಾರಿ,ಚಳ್ಳಕೆರೆ ಸೇರಿದಂತೆ ಹಲವಡೆ ಡಿಜೆಗೆ ಅವಕಾಶ ನೀಡಲಾಗಿದೆ,ಆದರೆ ಇಲ್ಲಿ ಮಾತ್ರ ಶೋಭಾಯಾತ್ರೆಗೆ ಡಿಜೆಗೆ ಪರ್ಮಿಷನ್ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು!? ಇದಕ್ಕುತ್ತರಿಸಿದ ಡಿವೈಎಸ್ಪಿ ರಾಜಣ್ಣ ಜಿಲ್ಲಾಧಿಕಾರಿಗಳ ಆದೇಶವಿದೆ ಹಾಗಾಗಿ ಯಾವುದೇ ಕಾರಣಕ್ಕೂ ಡಿಜೆ ಪರ್ಮಿಷನ್ ಇಲ್ಲ ಎಂದರು. ಪಟ್ಟು ಬಿಡದ ಮಾಜಿ ಸಚಿವ ಶ್ರೀರಾಮುಲು ಮತ್ತು ಬೆಂಬಲಿಗರು ಡಿಜೆಗಾಗಿ ರಸ್ತೆಯಲ್ಲಿ ಕೂತು ಪ್ರತಿಭಟನೆ ಮುಂದುವರಿಸಿದ್ದಾರೆ.
ವರದಿ : ಗಂಗಾಧರ ಪಿಎಂ




