ಪಾವಗಡ: ತುಮಕೂರು ಜಿಲ್ಲಾ ಪಾವಗಡ ತಾಲ್ಲೂಕಿನ. ಜೆಡಿಎಸ್ ಪಕ್ಷದ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಹಾಗೂ ಪಕ್ಷದ ಪದಾಧಿಕಾರಿಗಳು ವತಿಯಿಂದ ಪಾವಗಡದಲ್ಲಿರುವ ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ದಿನಾಂಕ 19/07/25 ಶನಿವಾರ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ಜುಲೈ 21 ರಂದು ಪಾವಗಡಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದು, ಈ ಸಂದರ್ಭ ಪಾವಗಡ ತಾಲೂಕಿನ ದೀರ್ಘಕಾಲೀನ ಮತ್ತು ಜ್ವಲಂತ ಸಮಸ್ಯೆಗಳತ್ತ ಗಮನಹರಿಸಬೇಕೆಂದು ಜೆಡಿಎಸ್‌ನ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಒತ್ತಾಯಿಸಿದ್ದಾರೆ.
ಪಾವಗಡ ತಾಲೂಕಿಗೆ ತುಂಗಭದ್ರ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎತ್ತಿನಹೊಳೆ ಯೋಜನೆಯಲ್ಲಿ ಪಾವಗಡ ತಾಲೂಕು ಕೈ ಬಿದ್ದಿದೆ. ಮಧುಗಿರಿ ಹಾಗೂ ಕೊರಟಗೆರೆಗೆ 400 ಕೋಟಿ ರೂ. ಮೀಸಲಿಡಲಾಗಿದೆ, ಬರಪೀಡಿತ ಮತ್ತು ಗಡಿಭಾಗವಾಗಿರುವ ಪಾವಗಡಕ್ಕೆ ಅನ್ಯಾಯವಾಗಿದೆ. ಈ ಭಾಗದ ರೈತರ ಬದುಕು ಉಳಿಸಬೇಕಾದರೆ ತಕ್ಷಣ ಹಣ ಬಿಡುಗಡೆ ಮಾಡಬೇಕು,” ಎಂದು ಆಗ್ರಹಿಸಿದರು.
ಸೋಲಾರ್ ಸಮಸ್ಯೆ ಬಗೆಹರಿಸಲು ಮುಂದಾಗಿ: 2014ರಿಂದ ತಿರುಮಣಿ ಮತ್ತು ವಳ್ಳೂರು ಗ್ರಾಮಗಳಲ್ಲಿ ಸ್ಥಾಪಿತವಾದ ಸೋಲಾರ್ ಪಾರ್ಕ್ ಬಗ್ಗೆ ಮಾತನಾಡಿದ ಅವರು, “ಅಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಇನ್ನೂ ಬಗೆಹರಿಯಿಲ್ಲ. 8 ಸಾವಿರ ಉದ್ಯೋಗಗಳ ಭರವಸೆ ಇತ್ತು, ಆದರೆ ಇನ್ನೂ ಕಾರ್ಯಗತವಾಗಿಲ್ಲ,” ಎಂದು ಚುಚ್ಚಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿಂತುಹೋಗಿರುವ ಬಗ್ಗೆ ಗಮನ ಸೆಳೆದ ಅವರು, “ಗ್ರಾಮೀಣ ಜನತೆಗೆ ಪಕ್ಷಾತೀತವಾಗಿ ಸೌಲಭ್ಯ ನೀಡಬೇಕು. ಕುಡಿಯುವ ನೀರು ತಕ್ಷಣ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು,” ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎನ್.ಎ. ಈರಣ್ಣ, ಗೌರವಾಧ್ಯಕ್ಷ ರಾಜಶೇಖರಪ್ಪ, ಕಾರ್ಯದರ್ಶಿಗಳು ಸೊಗಡು ವೆಂಕಟೇಶ್, ಮುಖಂಡರಾದ ಗಂಗಾಧರ ನಾಯ್ಡು, ಮನು ಮಹೇಶ್, ಯುವ ಘಟಕದ ಭರತ್, ಗಗನ್ ರಾಜ್, ಕಾವಲಗೇರಿ ರಾಮಾಂಜಿ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.
ವರದಿ: ಶಿವಾನಂದ ಪಾವಗಡ




