Ad imageAd image

ರಾಜ್ಯಪಾಲರಿಂದ ಸಂವಿಧಾನಕ್ಕೆ ಕೊಳ್ಳಿ ಇಡುವ ಕೆಲಸ: ಮಾಜಿ ಎಂಎಲ್ಸಿ ಬೆಮೆಲ್ ಕಾಂತರಾಜು ಆರೋಪ

Bharath Vaibhav
ರಾಜ್ಯಪಾಲರಿಂದ ಸಂವಿಧಾನಕ್ಕೆ ಕೊಳ್ಳಿ ಇಡುವ ಕೆಲಸ: ಮಾಜಿ ಎಂಎಲ್ಸಿ ಬೆಮೆಲ್ ಕಾಂತರಾಜು ಆರೋಪ
WhatsApp Group Join Now
Telegram Group Join Now

ತುರುವೇಕೆರೆ: –ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕಾದ ರಾಜ್ಯಪಾಲರು ತಮ್ಮ ಕಛೇರಿಯನ್ನು ಬಿಜೆಪಿ ಕಛೇರಿಯನ್ನಾಗಿ ಮಾಡಿಕೊಂಡು ಸಂವಿಧಾನಕ್ಕೆ ಕೊಳ್ಳಿ ಇಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಆರೋಪಿಸಿದರು.

ಪಟ್ಟಣದ ಜೆ.ಕೆ.ಕಂಫರ್ಟ್ ನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸ್ವಾಭಿಮಾನಿ ಸಾಧನಾ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನರ ಆರ್ಶೀವಾದದಿಂದ 136 ಸ್ಥಾನ ಪಡೆದು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ಸುಳ್ಳು ಆರೋಪಗಳನ್ನು ಮಾಡಿ ಸರ್ಕಾರಕ್ಕೆ, ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಬಿಜೆಪಿ, ಜೆಡಿಎಸ್ ಪಕ್ಷಗಳು ಮಾಡುತ್ತಿವೆ. ಬಿಜೆಪಿ, ಜೆಡಿಎಸ್ ನಾಯಕರ ಮೇಲೆ ಸಾಕಷ್ಟು ಆರೋಪಗಳಿದ್ದು, ತನಿಖೆ ನಡೆದಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ ಎಂದು ಟೀಕಿಸಿದರು.

ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ಪಂಚ ಗ್ಯಾರಂಟಿಗಳನ್ನು ನೀಡಿ ದೇಶಕ್ಕೆ ಕರ್ನಾಟಕ ಮಾದರಿ ಎಂಬ ಹೆಗ್ಗುರುತನ್ನು ಸಾಧಿಸಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ, ಗ್ಯಾರಂಟಿ ನೀಡಲು ಹಣವಿಲ್ಲ ಎಂದು ಆರೋಪಿಸಿದ್ದ ಬಿಜೆಪಿ, ಜೆಡಿಎಸ್ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯನ್ನು ನಕಲು ಮಾಡಿದೆ ಎಂದರು.

ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ ಮಾತನಾಡಿ, ಜನಪರ, ಅಭಿವೃದ್ದಿ ಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತರುವುಕ್ಕೋಸ್ಕರ ಬಿಜೆಪಿ, ಜೆಡಿಎಸ್ ಪಕ್ಷಗಳು ಸುಳ್ಳು ಆರೋಪ ಮಾಡುತ್ತಿದೆ ಎಂದರು.

ಮಹಿಳಾ ನಾಯಕಿ ಗೀತಾರಾಜಣ್ಣ ಮಾತನಾಡಿ, ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಎಲ್ಲಾ ಜಾತಿ, ಧರ್ಮದ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಗ್ಯಾರಂಟಿಗಳು, ಸಾಧನೆಗಳನ್ನು ಜನರಿಗೆ ತಿಳಿಸಬೇಕೆನ್ನುವ ಉದ್ದೇಶದಿಂದ ಶೀಘ್ರದಲ್ಲೇ ತುಮಕೂರಿನಲ್ಲಿ ಸ್ವಾಭಿಮಾನಿ ಸಾಧನಾ ಸಮಾವೇಶ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಭಿವೃದ್ದಿ ಪರ ಸರ್ಕಾರದ ಜೊತೆ ನಾವಿದ್ದೇವೆ ಎಂದು ಸಾರಬೇಕಿದೆ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾಸ್ತಿಗೊಂಡನಹಳ್ಳಿ ದೇವರಾಜ್, ನಾಗರಾಜ್, ಪಕ್ಷದ ವಕ್ತಾರ ಮುರಳೀಧರ ಹಾಲಪ್ಪ, ವೀಕ್ಷಕ ಪಂಚಾಕ್ಷರಯ್ಯ, ವಾಲೆ ಚಂದ್ರಯ್ಯ, ಮುಖಂಡರಾದ ಕೊಂಡಜ್ಜಿ ಕುಮಾರ್, ಲಕ್ಷ್ಮೀದೇವಮ್ಮ, ನಂಜುಂಡಪ್ಪ, ಮಾಸ್ತಿಗೊಂಡನಹಳ್ಳಿ ಚಂದ್ರಶೇಖರ್, ನಟರಾಜ್, ವೇಣುಗೋಪಾಲ್, ನೂರುಲ್ಲಾ, ಚೇತನ್ ಕುಮಾರ್ ಸೇರಿದಂತೆ ನೂರಾರು ಮಂದಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!