ಬೆಳಗಾವಿ: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬೆಳಗಾವಿಯ ಮಾರ್ಕೆಟ್ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ ಅರ್ಬಾಜ (21), ರೂಪೇಶ ಹನುಮಂತ ವಾಕೋಡೆ (26) ಮೊಹಮ್ಮದ ಹುಸೇನ ಬಕ್ಷಿ (23) ಹಾಗೂ ಶ್ರವಣಕುಮಾರ (25) ಎಂದು ಗುರುತಿಸಲಾಗಿದೆ.
ಆರೋಪಿಗಳು ಖಡೇಬಜಾರ ರಸ್ತೆಯಲ್ಲಿರುವ ಅಂಗಡಿಯಲ್ಲಿ ಸಾಮಾನು ಖರೀದಿ ಮಾಡಿ 500 ರೂ. ಮುಖಬೆಲೆಯ ನಕಲಿ ನೋಟು ನೀಡುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಲಾಗಿದೆ.
ಮಾರ್ಕೆಟ್ ಪೊಲೀಸ್ ಠಾಣೆಯ ಪಿಐ ಜೆ. ಎಂ ಕಾಲಮಿರ್ಚಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳ ಬಳಿ ಇದ್ದ 500 ಮುಖ ಬೆಲೆಯ 495 ನಕಲಿ ನೋಟುಗಳು, ನಾಲ್ಕು ಮೋಬೈಲ್ ಹ್ಯಾಂಡಸೆಟ್‌ಗಳು, ಮಾರುತಿ ಸುಜುಕಿ ಕಂಪನಿಯ ಸ್ವಿಪ್ಟ್ ಕಾರು ಜಪ್ತಿ ಮಾಡಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಮಾರ್ಕೆಟ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.




