ಬಾಗಲಕೋಟೆ : ಕಬ್ಬು ಕಟಾವು ಮಾಡುವ ನೆಪದಲ್ಲಿ ಜಿಲ್ಲೆಗೆ ಎಂಟ್ರಿಕೊಟ್ಟು ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಗ್ಯಾಂಗ್ನ ಬಾಗಲಕೋಟೆ ಪೊಲೀಸರು ಭೇದಿಸಿದ್ದಾರೆ.
ಶಂಕರ್ ಪವಾರ್ (20), ಅಭಿ ಬೋಸ್ಲೆ(19), ಲಕ್ಷ್ಮೀ ಬೋಸ್ಲೆ (40), ಕರಣ ಪವಾರ್ (20) ಮತ್ತು ಮಮತಾ ಬೋಸ್ಲೆ(21) ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲ ಮಹಾರಾಷ್ಟದ ಪರಬಾನಿ ಜಿಲ್ಲೆ ಮಂಗರೂಲ ತಾಂಡಾದ ನಿವಾಸಿಗಳು ಎಂಬುದು ಗೊತ್ತಾಗಿದೆ.
ಕಬ್ಬು ಕಟಾವು ಕೆಲಸ ಮಾಡುವ ನೆಪದಲ್ಲಿ ಬಾಗಲಕೋಟೆಗೆ ಬಂದಿದ್ದ ಈ ತಂಡ ಹಗಲು ವೇಳೆ ಹೊಲದಲ್ಲಿ ಕೆಲಸ ಮಾಡಿದರೆ, ರಾತ್ರಿ ಕಳ್ಳತನಕ್ಕೆ ಇಳಿಯುತ್ತಿತ್ತು. ಜಾಕೆಟ್ ಮತ್ತು ಮಾಸ್ಕ್ ಹಾಕಿಕೊಂಡು ಕೈನಲ್ಲಿ ಬ್ಯಾಟರಿ, ರಾಡ್ ಹಿಡಿದು ಮನೆಗಳ್ಳತನ ಕೆಲಸ ಮಾಡ್ತಿತ್ತು.
ಆರೋಪಿಗಳು ಕಳವು ಮಾಡುವ ದೃಶ್ಯಗಳು ಕೂಡ ಲಭ್ಯವಾಗಿದ್ದು, ಖತರ್ನಾಕ್ ಗ್ಯಾಂಗ್ನ ಹೆಡೆಮುರಿ ಕಟ್ಟುವಲ್ಲಿ ಗುಳೇದಗುಡ್ಡ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 6 ಲಕ್ಷದ 8 ಸಾವಿರ ಮೌಲ್ಯದ 25 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.




