ಬದೌನ್ (ಉತ್ತರ ಪ್ರದೇಶ): ಅಲಿಗಢದಲ್ಲಿ ಅತ್ತೆ ಮತ್ತು ಭಾವಿ ಅಳಿಯ ಪರಾರಿಯಾದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಈ ಬಾರಿ ಅತ್ತೆ ಪರಾರಿಯಾಗಿರುವುದು ಅಳಿಯನ ತಂದೆಯ ಜೊತೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.
ಬದೌನ್ನಲ್ಲಿ ಈ ರೀತಿಯ ವಿಚಿತ್ರ ಪ್ರಕರಣ ನಡೆದಿದೆ. ಹೆಂಡತಿ ತನ್ನ ಬೀಗರ ಜೊತೆ ಓಡಿ ಹೋಗಿದ್ದು, ಹೋಗುವ ಮುನ್ನ ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪರಾರಿಯಾಗಿರುವ ಮಹಿಳೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣ ಸಂಬಂಧ ಇಬ್ಬರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಬೀಗರ ನಡುವೆ ಮೂಡಿದ ಅನುರಾಗ: ಹೆಂಡತಿಯ ತಾಯಿ ಹಾಗೂ ಗಂಡನ ತಂದೆ ನಡುವೆ ಒಡನಾಟ ಶುರುವಾಗಿದೆ. ಇದು ಕ್ರಮೇಣ ಪ್ರೀತಿಗೆ ತಿರುಗಿದೆ. ಸಂಬಂಧದಲ್ಲಿ ಬೀಗರಾಗಬೇಕಿದ್ದ ಹಿನ್ನೆಲೆ ಒಡನಾಟವು ತುಸು ಹೆಚ್ಚಾಗಿ ಇಬ್ಬರ ನಡುವೆ ಅನುರಾಗ ಮೂಡಿಸಿದೆ. ಹಲವು ಕಾಲಗಳಿಂದ ಇವರ ನಡುವೆ ಪ್ರೀತಿ ಇತ್ತು ಎಂಬುದು ಇದೀಗ ಬಯಲಾಗಿದೆ.
ನಾಲ್ಕು ಮಕ್ಕಳ ತಾಯಿ : ಪರಾರಿಯಾಗಿರುವ ಮಹಿಳೆ ನಾಲ್ಕು ಮಕ್ಕಳ ತಾಯಿ ಯಾಗಿದ್ದು, ಆಕೆಯ ಓರ್ವ ಮಗಳನ್ನು ಮೂರು ವರ್ಷದ ಹಿಂದೆ ಈಗ ಓಡಿದ ಹೋದವನ ಮಗನ ಜತೆಗೇ ಮದುವೆ ಮಾಡಿಕೊಡಲಾಗಿತ್ತು. ಬೀಗರ ನಡುವಿನ ಒಡನಾಟ ಕ್ರಮೇಣ ಪ್ರೀತಿಗೆ ತಿರುಗಿತ್ತು. ಈ ವೇಳೆ ಪದೇ ಪದೇ ಅವರಿಬ್ಬರು ಭೇಟಿ ಆಗುತ್ತಿದ್ದರು. ಇವರ ಸಂಬಂಧದ ಕುರಿತು ಯಾರಿಗೂ ಅನುಮಾನ ಕೂಡಾ ಬಂದಿರಲಿಲ್ಲ.
ಮತ್ತೊಂದು ಕಡೆ ಪರಾರಿಯಾಗಿರುವ ಮಹಿಳೆಯ ಗಂಡ ವೃತ್ತಿಯಲ್ಲಿ ಟ್ರಕ್ ಡ್ರೈವರ್ ಆಗಿದ್ದಾನೆ. ಡ್ರೈವರ್ ಆಗಿರುವುದರಿಂದ ಸಹಜವಾಗಿಯೇ ಆತ ಮನೆಯಿಂದ ಹೆಚ್ಚು ದೂರು ಉಳಿಯುತ್ತಿದ್ದ. ಇದನ್ನೇ ಲಾಭವನ್ನಾಗಿ ಬಳಸಿಕೊಂಡು ಮಹಿಳೆಯ ಮನೆಗೆ ಅಳಿಯನ ತಂದೆ ಪದೆ ಪದೇ ಭೇಟಿ ನೀಡುತ್ತಿದ್ದರು. ಅಂತಿಮವಾಗಿ ಇಬ್ಬರು ಮನೆಯಿಂದ ಓಡಿ ಹೋಗುವ ನಿರ್ಧಾರ ಮಾಡಿ ಇದೀಗ ಪರಾರಿಯಾಗಿದ್ದಾರೆ.
ಮೂರು ದಿನಕ್ಕೆ ಒಂದು ಬಾರಿ ಭೇಟಿ: ಟ್ರಕ್ ಡ್ರೈವರ್ ಆದ ಹಿನ್ನೆಲೆ ಗಂಡ ತಿಂಗಳಿಗೆ ಎರಡು ಬಾರಿ ಮಾತ್ರ ಮನೆಗೆ ಭೇಟಿ ನೀಡುತ್ತಿದ್ದ, ಆದರೆ, ಪರಾರಿಯಾಗಿರುವ ಮಹಿಳೆಯ ಮಗಳ ಮಾವ ಮಾತ್ರ ಮೂರು ದಿನಕ್ಕೆ ಒಮ್ಮೆ, ಇವರ ಮನೆಗೆ ಭೇಟಿ ನೀಡುತ್ತಿದ್ದ. ಅನೇಕ ಬಾರಿ ಮಧ್ಯರಾತ್ರಿಯಲ್ಲೂ ಕೂಡಾ ಬಂದು ಬಿಡುತ್ತಿದ್ದ. ಆದರೆ ಬೆಳಗಿನ ಹೊತ್ತಿಗಷ್ಟರಲ್ಲೇ ಹೊರಟು ಹೋಗುತ್ತಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇಬ್ಬರು ಸಂಬಂಧಿಕರಾದ ಹಿನ್ನಲೆ ಯಾವುದೇ ಅನುಮಾನ ಕೂಡಾ ವ್ಯಕ್ತವಾಗಿರಲಿಲ್ಲ ಎಂದು ಕುಟುಂಬದ ನೆರೆಹೊರೆಯವರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದತ್ತಗಂಜ್ ಸಿಒ ಕೆ.ಕೆ. ತಿವಾರಿ ತಿಳಿಸಿದ್ದಾರೆ.