ಕಾನ್ಪುರ : ಹೋಳಿ ಆಡಿದ ನಂತರ ಸ್ನಾನ ಮಾಡಲಿ ಎಂದು ನೀರಿಗಿಳಿದ ನಾಲ್ವರು ಸ್ನೇಹಿತರು ಗಂಗಾನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ಮಹಾರಾಜಪುರದ ಬಳಿ ಶುಕ್ರವಾರ ಸಂಜೆ ನಡೆದಿದೆ. ಮಹೇಂದ್ರ ಅಲಿಯಾಸ್ ನೀರಜ್, ರಾಹುಲ್, ಸುಮಿತ್ ಮತ್ತು ಪ್ರಿಯಾಂಶು ನೀರುಪಾಲಾದ ಸ್ನೇಹಿತರು.
ನ್ಯೂ ಆಜಾದ್ ನಗರದ ರಾಹುಲ್ ಸಿಂಗ್ ತನ್ನ ಸ್ನೇಹಿತರಾದ ಸುಮಿತ್, ಮಹೇಂದ್ರ ಅಲಿಯಾಸ್ ನೀರಜ್, ಶಿವಂ ಸಾಹು, ಪ್ರಿಯಾಂಶು ಮತ್ತು ರಾಜ್‌ಕುಮಾರ್ ಯಾದವ್ ಅವರೊಂದಿಗೆ ಹೋಳಿ ಆಡಿದ ಬಳಿಕ ಗಂಗಾ ನದಿಯಲ್ಲಿ ಸ್ನಾನ ಮಾಡಲೆಂದು ಎರಡು ಬೈಕ್‌ಗಳಲ್ಲಿ ಮಹಾರಾಜಪುರದ ಸಿಲ್ವಾಸ್ಸಾ ಪ್ಲಾಟಿಂಗ್ ಪ್ರದೇಶಕ್ಕೆ ತೆರಳಿದ್ದರು.
ಸ್ನಾನ ಮಾಡುತ್ತಲೇ ತನ್ನ ಮೊಬೈಲ್ನಲ್ಲಿ ರೀಲ್ಸ್ ಮಾಡುತ್ತಿದ್ದ ಮಹೇಂದ್ರ ಎಂಬಾತ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಆಳ ನೀರಿನಲ್ಲಿ ಮುಳುಗಿದ್ದಾನೆ. ಆತ ಮುಳುಗುತ್ತಿದ್ದ ದೃಶ್ಯ ಕಂಡ ರಾಹುಲ್, ಸುಮಿತ್ ಮತ್ತು ಪ್ರಿಯಾಂಶು ಅವನನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ, ಈ ವೇಳೆ ಒಬ್ಬೊಬ್ಬರಂತೆ ಎಲ್ಲರೂ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಇದನ್ನು ನೋಡಿ, ಸ್ವಲ್ಪ ದೂರದಲ್ಲಿದ್ದ ರಾಜ್‌ಕುಮಾರ್ ಯಾದವ್ ಮತ್ತು ಶಿವಂ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯ ನುರಿತ ಈಜುಗಾರರೊಂದಿಗೆ ಅವರಿಗಾಗಿ ಹುಟುಕಾಟ ನಡೆಸಿದ್ದಾರೆ. ಆದರೆ, ಸಂಜೆಯಾಗಿದ್ದರಿಂದ ಸ್ಥಗಿತಗೊಂಡಿದ್ದ ಶೋಧ ಕಾರ್ಯವನ್ನು ಶನಿವಾರ ಮತ್ತೆ ಮುಂದುವರೆಸಿರುವುದಾಗಿ ಪೂರ್ವ ಡಿಸಿಪಿ ಎಸ್‌ಕೆ ಸಿಂಗ್ ಮಾಹಿತಿ ನೀಡಿದ್ದಾರೆ.