ಬೆಂಗಳೂರು: ವೃದ್ಧ ಮಹಿಳೆಗೆ 50 ಲಕ್ಷ ರೂ. ವಂಚಿಸಿದ ಆರೋಪದ ಮೇಲೆ ಖಾಸಗಿ ಬ್ಯಾಂಕಿನ ಡೆಪ್ಯೂಟಿ ಮ್ಯಾನೇಜರ್ ಸೇರಿದಂತೆ ನಾಲ್ವರನ್ನು ಗಿರಿನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಗಿರಿನಗರದ ಇಂಡಸ್ ಇಂಡ್ ಬ್ಯಾಂಕಿನ ಡೆಪ್ಯೂಟಿ ಮ್ಯಾನೇಜರ್ ಮೇಘನಾ, ಆಕೆಯ ಪತಿ ಶಿವಪ್ರಸಾದ್, ಸ್ನೇಹಿತರಾದ ವರದರಾಜು ಹಾಗೂ ಅನ್ವರ್ ಗೌಸ್ ಎಂಬುವವದನ್ನು ಬಂಧಿಸಿ ರೂ.50 ಲಕ್ಷ ಜಪ್ತಿ ಮಾಡಿದ್ದಾರೆ.
ಗಿರಿನಗರ ನಿವಾಸಿ ಸಾವಿತ್ರಮ್ಮ (76) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಜನವರಿಯಲ್ಲಿ ಸಾವಿತ್ರಮ್ಮ ಅವರ ಪತಿಗೆ ಸೇರಿದ್ದ ಚಾಮರಾಜಪೇಟೆಯ ಮನೆಯನ್ನು 1 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಈ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು.
ಡೆಪ್ಯೂಟಿ ಮ್ಯಾನೇಜರ್ ಮೇಘನಾ ನಿಮ್ಮ ಎರಡು ಎಫ್ಡಿ ಬಾಂಡ್ಗಳ ಅವಧಿ ಮುಗಿದಿದೆ. ಇದನ್ನು ಹಿಂಪಡೆದು ಹೊಸದಾಗಿ ಎಫ್ಡಿ ಇರಿಸಿದರೆ, ಹೆಚ್ಚಿನ ಲಾಭಾಂಶ ಬರಲಿದೆ ಎಂದು ಸಾವಿತ್ರಮ್ಮಗೆ ತಿಳಿಸಿದ್ದಾರೆ. ಎಫ್ಡಿ ಬಾಂಡ್ ನವೀಕರಣಕ್ಕೆ ಅಗತ್ಯವಿರುವ ದಾಖಲೆಗಳು ಹಾಗೂ ಚೆಕ್ಗಳನ್ನು ಮನೆಗೆ ಬಂದು ಪಡೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ.
ಫೆ.13ರಂದು ಸಾವಿತ್ರಮ್ಮ ಅವರ ಮನೆಗೆ ಭೇಟಿ ನೀಡಿದ್ದ ಮೇಘನಾ, ಎಫ್ಡಿ ಬಾಂಡ್ ನವೀಕರಿಸುವ ನೆಪದಲ್ಲಿ ತರಾತುರಿಯಲ್ಲಿ ಎರಡು ಚೆಕ್ಗಳನ್ನು ಪಡೆದು ಕೆಲ ದಾಖಲೆಗೆ ಸಹಿ ಪಡೆದಿದ್ದಾರೆ. ಬಳಿಕ ಹಳೆಯ ಎಫ್ಡಿ ಬಾಂಡ್ ಗಳನ್ನು ನವೀಕರಿಸಿ ಹೆಚ್ಚಿನ ಲಾಭಾಂಶ ಬರುವ ಎಫ್ಡಿಗೆ ಹಣ ಹೂಡುವುದಾಗಿ ತಿಳಿಸಿದ್ದಾರೆ.
ಈ ನಡುವೆ ವೃದ್ಧ ದಂಪತಿಯ ಮಗ ಮೊಬೈಲ್ ಫೋನ್ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ 50 ಲಕ್ಷ ರೂ.ಗಳನ್ನು ಡೆಬಿಟ್ ಮಾಡಿರುವುದು ಕಂಡುಬಂದಿದೆ. ಬ್ಯಾಂಕ್ನಲ್ಲಿ ಪರಿಶೀಲಿಸಿದಾಗ, ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿರುವುದು ಕಂಡು ಬಂದಿದೆ. ನಂತರ ಕುಟುಂಬವು ಪೊಲೀಸರಿಗೆ ದೂರು ನೀಡಿದೆ. ಕೂಲಂಕಷ ತನಿಖೆಯ ನಂತರ ಪೊಲೀಸರು ನಾಲ್ವರನ್ನು ಬಂಧಿಸಿದಾಗ ಅಪರಾಧ ಕೃತ್ಯ ಬೆಳಕಿಗೆ ಬಂದಿದೆ.