ಮುಂಬೈ: ಆಧ್ಯಾತ್ಮದ ಹೆಸರಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಸತತ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ನಾಸಿಕ್ನ ಪ್ರಭಾವಿ ಜ್ಯೋತಿಷಿ ಅಶೋಕ್ ಖರಾತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ್ಯೋತಿಷ್ಯದ ಹೆಸರಿನಲ್ಲಿ ಕಾಮಕಾಂಡ ನಡೆಸುತ್ತಿದ್ದ ಭಂಡ ಜ್ಯೋತಿಷಿಯ ಮುಖವಾಡ ಕಳಚಿದೆ!ವಶೀಕರಣ ಮಾಡಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ನಾಸಿಕ್ನಲ್ಲಿ ಅಶೋಕ್ ಖರಾತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಈತನ ಕಚೇರಿಯಲ್ಲಿ ಅಳವಡಿಸಲಾಗಿದ್ದ ರಹಸ್ಯ ಕ್ಯಾಮೆರಾಗಳಲ್ಲಿ 58 ಮಹಿಳೆಯರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.
ಮಾಟ-ಮಂತ್ರದ ಭಯ ಹುಟ್ಟಿಸಿ ಈತ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳ ನೆಪದಲ್ಲಿ 67 ವರ್ಷದ ಈ ಜ್ಯೋತಿಷಿ ತನಗೆ ಅಮಲು ಪದಾರ್ಥ ನೀಡಿ, ವಶೀಕರಣ (Hypnotize) ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ತನಿಖೆಯಲ್ಲಿ ಬಯಲಾದ ಭೀಕರ ಸತ್ಯಗಳು:
ಪೊಲೀಸ್ ತನಿಖೆಯ ವೇಳೆ ಈ ಲೈಂಗಿಕ ಶೋಷಣೆ ಕೇವಲ ಒಬ್ಬ ಮಹಿಳೆಗೆ ಸೀಮಿತವಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ.
‘ಕ್ಯಾಪ್ಟನ್’ ವೇಷ: ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿರುವ ಖರಾತ್, ತನ್ನನ್ನು ತಾನು ‘ಕ್ಯಾಪ್ಟನ್’ ಎಂದು ಕರೆದುಕೊಳ್ಳುತ್ತಿದ್ದ. ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ಮಹಿಳೆಯರನ್ನು ತನ್ನ ಕಚೇರಿಗೆ ಕರೆಯಿಸಿಕೊಳ್ಳುತ್ತಿದ್ದ.
ವಶೀಕರಣ ಮತ್ತು ಬೆದರಿಕೆ: ಕಚೇರಿಗೆ ಬಂದ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ ವಶೀಕರಣ ಮಾಡುತ್ತಿದ್ದ. ನಂತರ ಅವರ ಪತಿಗೆ ಮರಣ ಸಂಭವಿಸುತ್ತದೆ ಎಂದು ಅಥವಾ ಮಾಟಮಂತ್ರದ ಭಯ ಹುಟ್ಟಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.
58 ಮಹಿಳೆಯರ ವಿಡಿಯೋ: ಆರೋಪಿಯ ಕಚೇರಿಯಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪೊಲೀಸರು ವಶಪಡಿಸಿಕೊಂಡಿರುವ ಪೆನ್-ಡ್ರೈವ್ನಲ್ಲಿ 58 ವಿವಿಧ ಮಹಿಳೆಯರೊಂದಿಗೆ ನಡೆಸಿದ ಅಶ್ಲೀಲ ಕೃತ್ಯಗಳ ವಿಡಿಯೋ ಕ್ಲಿಪ್ಗಳು ಪತ್ತೆಯಾಗಿವೆ.
SIT ತನಿಖೆಗೆ ಆದೇಶ:
ಈ ಪ್ರಕರಣದ ಗಂಭೀರತೆ ಪರಿಗಣಿಸಿ ರಾಜ್ಯ ಸರ್ಕಾರವು ಐಪಿಎಸ್ ಅಧಿಕಾರಿ ತೇಜಸ್ವಿನಿ ಸಾತ್ಪುತೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ನಾಸಿಕ್ ಕ್ರೈಮ್ ಬ್ರಾಂಚ್ ಘಟಕ-1 ಆರೋಪಿಯಿಂದ ವಶಪಡಿಸಿಕೊಂಡ ದಾಖಲೆಗಳು ಮತ್ತು ವಿಡಿಯೋಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ.




